ನಾಯಕನಹಟ್ಟಿ-: ಪ್ರತಿಯೊಬ್ಬರೂ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷೆ ಮಂಜುಳಾ ಶ್ರೀಕಾಂತ್ ಹೇಳಿದರು.

ಸೋಮವಾರ ಪಟ್ಟಣ ಪಂಚಾಯತಿ ಆವರಣದಲ್ಲಿ ಜಿಲ್ಲಾ ಪಂಚಾಯತ್ ಚಿತ್ರದುರ್ಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿತ್ರದುರ್ಗ, ರಾಷ್ಟ್ರೀಯ ಆರೋಗ್ಯ ಅಭಿಯಾನ ಚಿತ್ರದುರ್ಗ, ತಾಲ್ಲೂಕು ಪಂಚಾಯತ್ ಚಳ್ಳಕೆರೆ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಚಳ್ಳಕೆರೆ, ವೈದೇಹಿ ಆಸ್ಪತ್ರೆ ಬೆಂಗಳೂರು, ಪಟ್ಟಣ ಪಂಚಾಯಿತಿ ನಾಯಕನಹಟ್ಟಿ, ನಮ್ಮ ಕ್ಲಿನಿಕ್ ನಾಯಕನಹಟ್ಟಿ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಮೇಳವನ್ನು ಆಲಿಸಲಾಗಿತ್ತು. ಸಸಿಗೆ ನೀರು ಹಾಕುವ ಮೂಲಕ ಪಟ್ಟಣ ಪಂಚಾಯತಿ ಅಧ್ಯಕ್ಷೆ ಮಂಜುಳಾ ಶ್ರೀಕಾಂತ್ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಬಡವರಿಗೆ ದೂರದ ನಗರಗಳಿಗೆ ಹೋಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗದ ಸಂದರ್ಭದಲ್ಲಿ ಈ ರೀತಿಯ ಆರೋಗ್ಯ ಮೇಳಗಳು ವರದಾನವಾಗಲಿವೆ. ವೈದೇಹಿ ಆಸ್ಪತ್ರೆ ಸಿಬ್ಬಂದಿಗಳು ಸ್ಥಳದಲ್ಲೇ ಪರೀಕ್ಷಿಸಿ ಚಿಕಿತ್ಸೆ ನೀಡುತ್ತಿದ್ದು, ಸಾರ್ವಜನಿಕರು ಈ ಉಚಿತ ಆರೋಗ್ಯ ಮೇಳದ ಸದುಪಯೋಗ ಪಡೆದುಕೊಳ್ಳಬೇಕು. ಪಟ್ಟಣದ ನಮ್ಮ ಕ್ಲಿನಿಕ್ ಸಿಬ್ಬಂದಿಗಳು ಸಾರ್ವಜನಿಕರಿಗೆ ಸ್ಪಂದಿಸುತ್ತಿದ್ದು ಸಾಮಾನ್ಯ ಕಾಯಿಲೆಗಳಿಗೆ ನಮ್ಮ ಕ್ಲಿನಿಕ್ ನಲ್ಲಿ ಉತ್ತಮ ರೀತಿಯ ಚಿಕಿತ್ಸೆ ದೊರೆಯುತ್ತಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಆರೋಗ್ಯ ಮೇಳಗಳು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜನೆ ಮಾಡಲಿ ಎಂದು ಆಶಿಸಿದರು.

ನಂತರ ಪಟ್ಟಣ ಪಂಚಾಯಿತಿ ಸದಸ್ಯ ಹಾಗೂ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜೆ ಆರ್ ರವಿಕುಮಾರ್ ಮಾತನಾಡಿ ನಾಯಕನಹಟ್ಟಿ ಪಟ್ಟಣದಲ್ಲಿ 2023ರಲ್ಲಿ ನಮ್ಮ ಕ್ಲಿನಿಕ್ ಪ್ರಾರಂಭಗೊಂಡು ಪಟ್ಟಣದ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದೆ. ಇದರ ಜೊತೆಗೆ ವೈದೇಹಿ ಆಸ್ಪತ್ರೆ ಸಿಬ್ಬಂದಿಗಳ ಸಹಕಾರದೊಂದಿಗೆ ಪಟ್ಟಣದ ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡಲು ಉಚಿತ ಆರೋಗ್ಯ ಮೇಳಗಳನ್ನು ಆಯೋಜನೆ ಮಾಡುತ್ತಿರುವುದು ಸಂತಸ ತಂದಿದೆ. ಪಟ್ಟಣದಲ್ಲಿ ಸಮುದಾಯ ಆರೋಗ್ಯ ಕೇಂದ್ರವಿದ್ದರೂ ನಮ್ಮ ಕ್ಲಿನಿಕ್ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಉತ್ತಮ ಸೇವೆಯನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ನಂತರ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಅನ್ವರ್ ಮಾತನಾಡಿ ಆರೋಗ್ಯವೇ ಭಾಗ್ಯ, ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ನಾವುಗಳು ಸೇವಿಸುವ ಆಹಾರ ಕಲಬೆರಕೆಯಿಂದ ಕೂಡಿದ್ದು ನಾವುಗಳು ಸರಿಯಾದ ವ್ಯಾಯಾಮ ಹಾಗೂ ಗುಣಮಟ್ಟದ ಚಿಕಿತ್ಸೆ ಪಡೆದರೇ ಮಾತ್ರ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಆದ್ದರಿಂದ ನಮ್ಮ ಕ್ಲಿನಿಕ್ ವತಿಯಿಂದ ಆಯೋಜಿಸಿರುವ ಉಚಿತ ಆರೋಗ್ಯ ಮೇಳದಲ್ಲಿ ಪಟ್ಟಣದ ಸಾರ್ವಜನಿಕರು ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಬೋಸಮ್ಮ ಮಂಜುನಾಥ್, ನಿವೃತ್ತ ಸೈನಿಕ ಹಾಲೇಶ್ ಕಲ್ಲಹಳ್ಳಿ, ವೈದ್ಯರಾದ ಮಣಿ ಶಂಕರ್, ಅಭಿಷೇಕ್, ಹರ್ಷಿತ, ಗಿರೀಶ್, ಭುವನ್, ಅಮೋಘ, ಲಿಯೂ, ಕುಮಾರ್, ವೈದೇಹಿ ಆಸ್ಪತ್ರೆ ಪಿ ಆರ್ ಓ ಹರೀಶ್, ಸುರೇಶ್ ಅರ್ಜುನ್ ಸೇರಿದಂತೆ ಪಟ್ಟಣದ ನಮ್ಮ ಕ್ಲಿನಿಕ್ ಸಿಬ್ಬಂದಿಗಳಾದ ಎನ್ ವೀರೇಶ್, ಈ ಸೌಮ್ಯ, ಪ್ರದೀಪ್, ಹಾಗೂ ಪೌರಕಾರ್ಮಿಕರು, ಸಾರ್ವಜನಿಕರು ಇದ್ದರು.

About The Author

Namma Challakere Local News
error: Content is protected !!