ತೋಟದ ಮನೆಗಳಿಗೆ ದಾರಿ ಇಲ್ಲದೆ ಪರದಾಟ: ರಸ್ತೆ ಅಭಿವೃದ್ಧಿಗೆ ಗ್ರಾಮಸ್ಥರ ಮನವಿ
ಚಳ್ಳಕೆರೆ: ತಾಲೂಕಿನ ಚನ್ನಗಾನಹಳ್ಳಿ ಗ್ರಾಮದ ತೋಟದ ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಮರ್ಪಕವಾಗಿಲ್ಲದ ಕಾರಣ ಶಾಲಾ ಮಕ್ಕಳು, ವಯೋವೃದ್ಧರು ಹಾಗೂ ಜಮೀನು ಕೆಲಸಕ್ಕೆ ತೆರಳುವ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದ ತೋಟದ ಮನೆಗಳಿಗೆ ತೆರಳುವ ರಸ್ತೆಯು ಹಾಳಾಗಿದ್ದು, ರಸ್ತೆ ಪಕ್ಕದಲ್ಲಿ ಜಾಲಿ ಗಿಡಗಳು ದಟ್ಟವಾಗಿ ಬೆಳೆದು ಸಂಚಾರಕ್ಕೆ ಅಡ್ಡಿಯಾಗಿವೆ. ಮಳೆಯ ಸಂದರ್ಭಗಳಲ್ಲಿ ರಸ್ತೆ ಮೇಲೆ ನೀರು ನಿಂತು ಕೆಸರಿನ ವಾತಾವರಣ ನಿರ್ಮಾಣವಾಗುತ್ತಿದ್ದು, ವಾಹನ ಹಾಗೂ ಕಾಲ್ನಡಿಗೆ ಸಂಚಾರ ದುಸ್ತರವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ರಸ್ತೆಯನ್ನು ಅವಲಂಬಿಸಿರುವ ಹಲವು ಕುಟುಂಬಗಳು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದು, ಶಾಲಾ ಮಕ್ಕಳ ಶಿಕ್ಷಣ, ರೈತರ ಕೃಷಿ ಚಟುವಟಿಕೆಗಳು ಹಾಗೂ ತುರ್ತು ಆರೋಗ್ಯ ಸೇವೆಗಳ ಮೇಲೂ ಪರಿಣಾಮ ಬೀರುತ್ತಿದೆ. ಅನಾರೋಗ್ಯದ ಸಂದರ್ಭಗಳಲ್ಲಿ ಅಂಬುಲೆನ್ಸ್ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಆದ್ದರಿಂದ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ರಸ್ತೆ ದುರಸ್ತಿ ಹಾಗೂ ಅಭಿವೃದ್ಧಿ ಕಾಮಗಾರಿ ಕೈಗೊಂಡು ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ನಿವೃತ್ತ ಅರಣ್ಯ ಅಧಿಕಾರಿ ನಿಂಗಣ್ಣ, ರೈತ ಮುಖಂಡ ದಾದು, ರಾಮಣ್ಣ ಸೇರಿದಂತೆ ಹಲವರು ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

