ಹಣಕಾಸು ಸಾಕ್ಷರತೆ ಕುರಿತು ಜಾಗೃತಿ ಕಾರ್ಯಗಾರ
ಚಳ್ಳಕೆರೆ: ಸೈಬರ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಪರಿಚಿತ ಕರೆಗಳು, ನಕಲಿ ಲಿಂಕ್ಗಳು ಮತ್ತು ಸಂದೇಶಗಳಿಗೆ ಸಾರ್ವಜನಿಕರು ಪ್ರತಿಕ್ರಿಯಿಸಬಾರದು ಎಂದು ಕಾರ್ಯಕ್ರಮದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಶಿವಕುಮಾರ್ ಹೇಳಿದರು.
ಅವರು ನಗರದ ಬೆಂಗಳೂರು ರಸ್ತೆಯಲ್ಲಿರುವ ಛೇಂಬರ್ ಆಫ್ ಕಾಮರ್ಸ್ ಸಮುದಾಯ ಭವನದಲ್ಲಿ ಕ್ರೆಡಿಟ್ ಆಕ್ಸೆಸ್ ಗ್ರಾಮೀಣ್ ಲಿಮಿಟೆಡ್ನ ಚಳ್ಳಕೆರೆ ಶಾಖೆ ವತಿಯಿಂದ ಸಾಮಾಜಿಕ–ಆರ್ಥಿಕ ಅಭಿವೃದ್ಧಿ ಕಾರ್ಯಗಾರವನ್ನು ಆಯೋಜಿಸಿ, ಹಣಕಾಸು ಸಾಕ್ಷರತೆ ಹಾಗೂ ಡಿಜಿಟಲ್ ವಂಚನೆ ತಡೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಕಾರ್ಯಗಾರದಲ್ಲಿ ಜವಾಬ್ದಾರಿಯುತ ಸಾಲದ ಬಳಕೆ, ಕ್ರೆಡಿಟ್ ಶಿಸ್ತು, ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡುವ ಮಹತ್ವ ಹಾಗೂ ಡಿಜಿಟಲ್ ವಂಚನೆಗಳಿಂದ ಸುರಕ್ಷಿತವಾಗಿರುವ ಕ್ರಮಗಳ ಕುರಿತು ತಜ್ಞರು ಮಾಹಿತಿ ನೀಡಿದರು.
ಪ್ರಾದೇಶಿಕ ವ್ಯವಸ್ಥಾಪಕ ಜೆ.ಎಂ. ಮಂಜುನಾಥ್ ಮಾತನಾಡಿ,
ಬ್ಯಾಂಕ್ ಖಾತೆಯ ವಿವರ, ಎಟಿಎಂ ಪಿನ್, ಒಟಿಪಿ ಹಾಗೂ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು.
ಯಾವುದೇ ಅನುಮಾನಾಸ್ಪದ ಘಟನೆ ಕಂಡುಬಂದರೆ ತಕ್ಷಣವೇ ಪೊಲೀಸ್ ಠಾಣೆ ಅಥವಾ ಸೈಬರ್ ಸಹಾಯವಾಣಿಯನ್ನು ಸಂಪರ್ಕಿಸುವಂತೆ ತಿಳಿಸಿದರು.
ಗುಲ್ಬರ್ಗ ವಿಭಾಗೀಯ ವ್ಯವಸ್ಥಾಪಕ ಹೆಚ್.ಕೆ. ಶಿವಲಿಂಗಯ್ಯ, ಪ್ರಾದೇಶಿಕ ವ್ಯವಸ್ಥಾಪಕ ಜೆ.ಎಂ. ಮಂಜುನಾಥ್,
ವಲಯ ವ್ಯವಸ್ಥಾಪಕಿ ದೀಪಾ ಹಾಗೂ ನಿವೃತ್ತ ಡಿವೈಎಸ್ಪಿ ಪ್ರಹ್ಲಾದ್ ಮಾತನಾಡಿ, ಹಣಕಾಸಿನ ಶಿಸ್ತು ಉತ್ತಮ ಕುಟುಂಬ ಜೀವನಕ್ಕೆ ಅಗತ್ಯವಾಗಿದ್ದು, ಜವಾಬ್ದಾರಿಯುತ ಸಾಲ ಬಳಕೆ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕ್ರೆಡಿಟ್ ಆಕ್ಸೆಸ್ ಗ್ರಾಮೀಣ್ ಲಿಮಿಟೆಡ್ನ ಅಧಿಕಾರಿಗಳು, ಸಿಬ್ಬಂದಿ, ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಗ್ರಾಹಕರು ಭಾಗವಹಿಸಿದ್ದರು.

