ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಹಾಗೂ ಭದ್ರತೆ ಕಾಪಾಡುವುದು ಪೊಲೀಸ್ ಇಲಾಖೆಯಷ್ಟೇ ಅಲ್ಲ, ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ ತಳಕು ಪಿಎಸ್‌ಐ ಶಿವಕುಮಾರ್ ಕೆ
ಚಳ್ಳಕೆರೆ :
ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲ್ಲೂಕಿನ ದೊಡ್ಡಉಳ್ಳಾರ್ತಿ:- ಗ್ರಾಮದಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಜನ ಸಂಪರ್ಕ ಸಭೆ ಆಯೋಜಿಸಲಾಗಿತ್ತು. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಹಾಗೂ ಭದ್ರತೆ ಕಾಪಾಡುವುದು ಪೊಲೀಸ್ ಇಲಾಖೆಯಷ್ಟೇ ಅಲ್ಲ, ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯೂ ಆಗಿದೆ ಎಂದು ತಳಕು ಪೊಲೀಸ್ ಠಾಣೆಯ ಪಿಎಸ್‌ಐ ಶಿವಕುಮಾರ್ ಕೆ ತಿಳಿಸಿದರು.
ಅಪರಾಧ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದ್ದು, ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಚಟುವಟಿಕೆಗಳು ಕಂಡುಬಂದರೆ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು. ಮಾಹಿತಿ ನೀಡುವವರ ವಿವರಗಳನ್ನು ಗೌಪ್ಯವಾಗಿಡಲಾಗುತ್ತದೆ ಎಂದರು.
ಸೈಬರ್ ಅಪರಾಧಗಳು, ಆನ್‌ಲೈನ್ ವಂಚನೆ, ಬ್ಯಾಂಕ್ ಹ್ಯಾಕ್, ಯುಪಿಐ ಹಾಗೂ ಎಟಿಎಂ ವಂಚನೆಗಳ ಬಗ್ಗೆ ಎಚ್ಚರಿಕೆ ನೀಡಿದ ಅವರು, ವಂಚನೆ ನಡೆದ ತಕ್ಷಣ 1930 ಸೈಬರ್ ಅಪರಾಧ ಸಹಾಯವಾಣಿಗೆ ಕರೆ ಮಾಡುವಂತೆ ತಿಳಿಸಿದರು. OTP, ಪಿನ್ ಮತ್ತು ಪಾಸ್‌ವರ್ಡ್ ಯಾರಿಗೂ ನೀಡಬಾರದು ಎಂದರು.
ವೃತ್ತ ನಿರೀಕ್ಷಕ ಹನುಮಂತಪ್ಪ ಶಿರೇಹಳ್ಳಿ ಮಾತನಾಡಿ, ಅಪ್ರಾಪ್ತ ವಯಸ್ಕರಿಗೆ ವಾಹನ ಚಲಾಯಿಸುವುದು ಹಾಗೂ ಅವರಿಗೆ ವಾಹನ ನೀಡುವುದು ಕಾನೂನುಬಾಹಿರ ಅಪರಾಧ ಎಂದು ಎಚ್ಚರಿಸಿದರು. ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯವಾಗಿದ್ದು, ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಡಿವೈಎಸ್ಪಿ ಸತ್ಯನಾರಾಯಣ ರಾವ್ ಮಾತನಾಡಿ, ಪೊಲೀಸ್ ಇಲಾಖೆ ಸದಾ ಸಾರ್ವಜನಿಕರ ಸುರಕ್ಷತೆಗೆ ಬದ್ಧವಾಗಿದ್ದು, ಕಾನೂನು ಪಾಲನೆ ಮತ್ತು ಅಪರಾಧ ತಡೆಗೆ ಜನರು ಸಹಕರಿಸಬೇಕು ಎಂದರು. ಬಾಲ್ಯ ವಿವಾಹ ಕಾನೂನುಬಾಹಿರವಾಗಿದ್ದು, ಪೋಕ್ಸೋ ಕಾಯ್ದೆಯಡಿ ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದೊಡ್ಡಉಳ್ಳಾರ್ತಿ ಗ್ರಾಮದ ಗ್ರಾಮಸ್ಥರು ಹಾಗೂ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.

