ಚಳ್ಳಕೆರೆ :
ಸವಿತಾ ಮಹರ್ಷಿಗಳ ದಿನಾಚರಣೆ – ಸಮಾಜದ ಏಕತಾ ಸಭೆ
ಸಮಾಜದ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಒಟ್ಟಾಗಿ ಕಾರ್ಯನಿರ್ವಹಿಸುವ ಸಂಕಲ್ಪ,
ಚಳ್ಳಕೆರೆ: ತಾಲೂಕಿನ ತಾಲೂಕು ಆಡಳಿತ ಹಾಗೂ ಸವಿತಾ ಸಮುದಾಯದ ಸಹಯೋಗದಲ್ಲಿ ಸವಿತಾ ಮಹರ್ಷಿಗಳ ದಿನಾಚರಣೆಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಖ್ಯಾತ ಪತ್ರಕರ್ತ ಕನ್ನಡ ಸಂಪಿಗೆ ಪತ್ರಿಕೆಯ ಸಂಪಾದಕ ತಿಪ್ಪೇಸ್ವಾಮಿ ಅವರು ಸವಿತಾ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಸವಿತಾ ಸಮಾಜವು ಹಿಂದೂ ಧರ್ಮದ ಮೂಲ ಸಂಸ್ಕೃತಿ ಮತ್ತು ಪರಂಪರೆಯನ್ನು ಆಧಾರವಾಗಿ ಹೊಂದಿರುವ ಚಿಕ್ಕದು ಆದರೆ ಮಹತ್ವದ ಸಮುದಾಯವಾಗಿದೆ. ಇತಿಹಾಸದ ವಿವಿಧ ಹಂತಗಳಲ್ಲಿ ರಾಜಕೀಯ ಹಾಗೂ ಶೈಕ್ಷಣಿಕವಾಗಿ ತಕ್ಕ ಮಟ್ಟಿನ ಅವಕಾಶಗಳು ಲಭಿಸದೆ ಸಮಾಜ ಕುಂಠಿತಗೊಂಡಿರುವುದು ನೋವಿನ ಸಂಗತಿ. ಆದರೂ, ಸವಿತಾ ಸಮಾಜದವರು ತಮ್ಮ ಸಾಂಪ್ರದಾಯಿಕ ಕ್ಷೌರಿಕ ವೃತ್ತಿಯನ್ನು ಗೌರವದಿಂದ ನಿರ್ವಹಿಸುತ್ತಾ ಸ್ವಾವಲಂಬಿ ಜೀವನ ನಡೆಸುತ್ತಿದ್ದು, ಸಮಾಜದ ದೈನಂದಿನ ಜೀವನದಲ್ಲಿ ಅನಿವಾರ್ಯ ಪಾತ್ರವಹಿಸುತ್ತಿದ್ದಾರೆ.
ಸವಿತಾ ಸಮಾಜದ ಸೇವೆ ಇಲ್ಲದೆ ಜನಸಾಮಾನ್ಯರ ಜೀವನದಲ್ಲಿ ಅನೇಕ ಅಡಚಣೆಗಳು ಎದುರಾಗುತ್ತಿತ್ತೆಂಬುದನ್ನು ಎಲ್ಲರೂ ಅರಿಯಬೇಕು. ಈ ಹಿನ್ನೆಲೆಯಲ್ಲಿ ಸವಿತಾ ಸಮಾಜವು ಎಲ್ಲ ಸಮುದಾಯಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಪರಸ್ಪರ ಸಹಕಾರ ಮತ್ತು ಸೌಹಾರ್ದತೆಯೊಂದಿಗೆ ಸಮಾಜದ ಸಮಗ್ರ ಪ್ರಗತಿಗಾಗಿ ಹಗಲಿರುಳು ಶ್ರಮಿಸುತ್ತಿದೆ. ಇಂತಹ ದಿನಾಚರಣೆಗಳು ಕೇವಲ ಆಚರಣೆಗಷ್ಟೇ ಸೀಮಿತವಾಗದೆ, ಗುರುಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜವನ್ನು ಬಲಿಷ್ಠಗೊಳಿಸುವ ದಿಕ್ಕಿನಲ್ಲಿ ಮುನ್ನಡೆಯಬೇಕು ಎಂದು ಅವರು ತಿಳಿಸಿದರು
ಇನ್ನು ಈ ಸಂದರ್ಭದಲ್ಲಿ ಸವಿತಾ ಸಮುದಾಯದ ಅಧ್ಯಕ್ಷ ರಾಜು ಹಾಗೂ ಸಮಾಜದವರಾದ ಹನುಮಂತ ರಾಯ ನಾಗರಾಜ್ ಶಿವಣ್ಣ ಸತ್ಯನಾರಾಯಣ್ ಚಂದ್ರಶೇಖರ್ ಮೃತ್ಯುಂಜಯ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು,

