“ಕಷ್ಟಗಳ ಕುಲಕ್ಕೆ ರಾಮಬಾಣ ಶ್ರೀರಾಮರಕ್ಷಾ ಸ್ತೋತ್ರ” -ಶ್ರೀಮತಿ ಬಿ.ಎಂ ಗೀತಾ ಸುಂದರೇಶ್ ದೀಕ್ಷಿತ್.

ಚಳ್ಳಕೆರೆ- ಶ್ರೀರಾಮರಕ್ಷಾ ಸ್ತೋತ್ರದ ನಿತ್ಯಪಠಣವು ಕಷ್ಟಗಳ ಕುಲಕ್ಕೆ ರಾಮಬಾಣವಾಗಿದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಬಿ.ಎಂ.ಗೀತಾ ಸುಂದರೇಶ್ ದೀಕ್ಷಿತ್ ಅಭಿಪ್ರಾಯಪಟ್ಟರು.

ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಯಮ್ಮ ನರಸಿಂಹಮೂರ್ತಿ ಅವರ ವಾಲ್ಮೀಕಿ ನಗರದ ಮೇಘಶ್ರೀ ನಿವಾಸದಲ್ಲಿ ಆಯೋಜಿಸಿದ್ದ ವಾರದ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು “ಶ್ರೀರಾಮರಕ್ಷಾ ಸ್ತೋತ್ರದ ಮಹಿಮೆ”ಯ ಬಗ್ಗೆ ಉಪನ್ಯಾಸ ನೀಡಿದರು.

ಶ್ರೀಬುಧಕೌಶಿಕ ಋಷಿ ವಿರಚಿತ ಶ್ರೀರಾಮರಕ್ಷಾ ಸ್ತೋತ್ರದ ನಿತ್ಯ ಪಠಣದಿಂದ ಮನಶ್ಯಾಂತಿ ಸಿಗುತ್ತದೆ.ಕಷ್ಟಗಳ ಕುಲಸಂಹಾರಕ, ನಿತ್ಯಾನಂದದಾಯಕ ದಿವ್ಯಮಂತ್ರವೇ ಶ್ರೀರಾಮರಕ್ಷಾ ಸ್ತೋತ್ರವಾಗಿದೆ.ಈ ಸ್ತೋತ್ರದ ಒಂದೊಂದು ಅಕ್ಷರವನ್ನು ಓದುವುದರಿಂದಲೇ ಮಹಾ-ಮಹಾ ಪಾಪಗಳೆಲ್ಲವೂ ನಾಶವಾಗಬಲ್ಲವು.

ಇದರ ನಿತ್ಯ ಪಾರಾಯಣವು ವಜ್ರಪಂಜರದಂತೆ ವ್ಯಕ್ತಿಯನ್ನು ಆವರಿಸಿ,ಎಂಥ ಕಷ್ಟನಷ್ಟಗಳ ಹೊಡೆತದಿಂದಲೂ ರಕ್ಷಿಸುತ್ತದೆ. ಶ್ರೀರಾಮರಕ್ಷಾ ಸ್ತೋತ್ರ ಪಠಣದಿಂದ ಭಕ್ತ ಅಶ್ವಮೇಧಯಜ್ಞ ಮಾಡಿದುದಕ್ಕಿಂತಲೂ ಹೆಚ್ಚಿನ ಪುಣ್ಯ ಪಡೆಯುವರೆಂಬುದರಲ್ಲಿ ಸಂದೇಹವೇ ಇಲ್ಲ ಎಂದು ತಿಳಿಸಿದರು.

ಒಂದು ಬಾರಿಯ ಶ್ರೀರಾಮರಕ್ಷಾ ಸ್ತೋತ್ರದ ಪಠಣವು ಶ್ರೀವಿಷ್ಣು ಸಹಸ್ರನಾಮ ಪಾರಾಯಣಕ್ಕೆ ಸಮವಾಗಿರುತ್ತದೆ. ಆದ್ದರಿಂದ ಇದನ್ನು ಎಲ್ಲಾ ಸಮಯ-ಸಂದರ್ಭಗಳಲ್ಲಿಯೂ ಪಠಿಸುವುದರಿಂದ ಸಕಲ ಕೆಲಸ-ಕಾರ್ಯಗಳು ಕೈಗೂಡುವುದರೊಂದಿಗೆ ಸಾರ್ಥಕ ಜೀವನ ನಮ್ಮದಾಗುತ್ತದೆ ಎಂದು ಅದರ ವಿವಿಧ ಮಹಿಮೆಗಳನ್ನು ಅವಲೋಕಿಸಿದರು. ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ವಿಶೇಷ ಭಜನೆ ಮತ್ತು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮವನ್ನು ಯತೀಶ್ ಎಂ ಸಿದ್ದಾಪುರ ನಡೆಸಿಕೊಟ್ಟರು. ಈ ಸತ್ಸಂಗ ಸಭೆಯಲ್ಲಿ ಸದ್ಭಕ್ತರಾದ ಜಯಮ್ಮ ನರಸಿಂಹಮೂರ್ತಿ, ಹೆಚ್, ಲಕ್ಷ್ಮೀದೇವಮ್ಮ , ಶ್ರೀಮತಿ ಎಂ ಗೀತಾ ನಾಗರಾಜ್, ಗೀತಾ ವೆಂಕಟೇಶರೆಡ್ಡಿ, ಉಮಾ ಶ್ರೀನಿವಾಸರೆಡ್ಡಿ, ಬಿ.ಟಿ.ಗಂಗಾಂಬಿಕೆ, ಅನಿತಾ ಜಗದೀಶ್, ಗಾಯತ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!