ಭಾಷೆ-ಉಪ ಭಾಷೆಗಳ ನಡುವೆ ಸಾಮರಸ್ಯ ಕಾಪಾಡಿಕೊಳ್ಳಬೇಕು : ಕನ್ನಡ ಪ್ರಾಧ್ಯಾಪಕ ಪ್ರೊ.ಜಿ.ಎಸ್.ತಿಪ್ಪೇಸ್ವಾಮಿ
ಚಳ್ಳಕೆರೆ : ಭಾರತೀಯ ಭಾಷೆ ಮತ್ತು ಉಪ ಭಾಷೆಗಳ ನಡುವೆ ಸಾಮರಸ್ಯ ಕಾಪಾಡಿಕೊಳ್ಳಬೇಕು ಎಂದು ಕನ್ನಡ ಪ್ರಾಧ್ಯಾಪಕ ಪ್ರೊ.ಜಿ.ಎಸ್.ತಿಪ್ಪೇಸ್ವಾಮಿ ಹೇಳಿದರು.
ಇಲ್ಲಿನ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗ ಇವುಗಳ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಭಾರತೀಯ ಇತರಭಾಷೆಗಳೊಡನೆ ಕನ್ನಡ ಸಂಬಂಧ ಮತ್ತು ಸೃಜನಶೀಲತೆ-ಕನ್ನಡ ಅಭಿವ್ಯಕ್ತಿಯ ವೈಶಿಷ್ಟ್ಯಗಳು ಕುರಿತ ವಿಶೇಷ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾಷೆಗೆ ಗೌಪ್ಯತೆ ಮತ್ತು ರಹಸ್ಯತೆ ಗುಣವಿರುವುದರಿಂದ ಪಂಪ, ರನ್ನ, ಪೊನ್ನ ಮುಂತಾದ ಪ್ರಾಚೀನ ಕವಿಗಳು ತಮ್ಮ ಕಾವ್ಯಗಳಲ್ಲಿ ಭಾಷೆಯನ್ನು ಚನ್ನಾಗಿ ದುಡಿಸಿಕೊಂಡಿದ್ದಾರೆ. ಅವರ ಕಾವ್ಯಗಳನ್ನು ಹೆಚ್ಚು ಓದುವುದರ ಮೂಲಕ ಭಾಷಾ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ರಾಂಶುಪಾಲ ಪ್ರೊ.ಬಿ.ಎಸ್.ಮಂಜುನಾಥ ಮಾತನಾಡಿ, ನಾಡಿನ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಳುಕು ಹಾಗು ಬೆಳೆಗೆರೆ ಮನೆತನದ ಕೊಡುಗೆ ಅಪಾರವಾಗಿದೆ. ಹಾಗಾಗಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸುವ ಸಾಹಿತ್ಯ, ಸಂಸ್ಕೃತಿ ಮುಂತಾದ ಕಾರ್ಯಕ್ರಮ ಗಳಲ್ಲಿ ಪಾಲ್ಗೊಳ್ಳುವ ಮೂಲಕ ಪದವಿ ವಿದ್ಯಾರ್ಥಿಗಳು ಉದಾತ್ತ ಚಿಂತನೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ ಮಾತನಾಡಿ, ಮಾತೃಭಾಷೆ ಬಳಕೆಯಿಂದ ಅಲೋಚನೆ, ಅಭಿರುಚಿ ಬೆಳೆಯುತ್ತದೆ. ಪ್ರತಿಯೊಬ್ಬರು ಭಾಷೆಯ ಮಹತ್ವ ಅರಿತುಕೊಳ್ಳಬೇಕು ಎಂದು ಹೇಳಿದರು.
ಪ್ರಾಧ್ಯಾಪಕ ಕೆ. ಚಿತ್ತಯ್ಯ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥೆ ಪ್ರೊ.ಜಯಮ್ಮ, ಪ್ರೊ.ಕೆ.ಆರ್.ಜೆ.ರಾಜಕುಮಾರ್, ಕನ್ನಡ ಪ್ರಾಧ್ಯಾಪಕ ಪ್ರೊ.ಜಿ.ವಿ.ರಾಜಣ್ಣ, ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕಿ ಶಶಿಕಲಾ, ಪ್ರೊ.ಎಂ.ಮುರಳಿ, ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಗಂಗಾಧರ ಇದ್ದರು.
ಚಳ್ಳಕೆರೆ ನಗರದ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದಲ್ಲಿ ಗುರುವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಪ್ರಾಂಶುಪಾಲ ಪ್ರೊ.ಬಿ.ಎಸ್.ಮಂಜುನಾಥ ಉದ್ಘಾಟಿಸಿದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ, ಕನ್ನಡ ಪ್ರಾಧ್ಯಾಪಕ ಪ್ರೊ.ಜಿ.ಎಸ್.ತಿಪ್ಪೇಸ್ವಾಮಿ ಇದ್ದರು. ……

