“ಯುವಕರು ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ರೂಢಿಸಿಕೊಳ್ಳಲಿ”:- ಶ್ರೀಶಾರದಾಶ್ರಮದ ಮಾತಾಜೀ ತ್ಯಾಗಮಯೀ ಅಭಿಮತ. ಚಳ್ಳಕೆರೆ:-ಈಗಿನ ಯುವಕ-ಯುವತಿಯರು ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ತಮ್ಮ ನಿತ್ಯ ಜೀವನದಲ್ಲಿ ರೂಢಿಸಿಕೊಳ್ಳುವ ಅಗತ್ಯವಿದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ಅಭಿಪ್ರಾಯಪಟ್ಟರು. ನಗರದ ಬೆಂಗಳೂರು ರಸ್ತೆಯ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ “ಸ್ವಾಮಿ ವಿವೇಕಾನಂದರ 162ನೇ ಜಯಂತ್ಯುತ್ಸವ”ದ ಪ್ರಯುಕ್ತ ನಗರದ ಬಾಪೂಜಿ ಆರ್ಯುವೇದ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ “ರಾಷ್ಟ್ರೀಯ ಯುವ ದಿನಾಚರಣೆ”ಯ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಅವರು ಮಾತನಾಡಿದರು. “ಸ್ವಾಮಿ ವಿವೇಕಾನಂದರು ತಮ್ಮ ಜೀವಿತಾವಧಿಯಲ್ಲಿ ಪ್ರತಿಪಾದಿಸಿದ ತ್ಯಾಗ ಮತ್ತು ಸೇವೆಯ ಆದರ್ಶಗಳು ಇಂದಿನ ಯುವಕರಿಗೆ ಮಾದರಿಯಾಗಬೇಕು. ಅವರು ತಮ್ಮ ಗುರು ಶ್ರೀರಾಮಕೃಷ್ಣ ಪರಮಹಂಸರ ಮೇಲಿಟ್ಟಿದ್ದ “ಗುರುಭಕ್ತಿ” ಅಸಾಧಾರಣವಾದದ್ದು, ಅವರ ಅಪರಿಮಿತ “ರಾಷ್ಟ್ರಪ್ರೇಮ”ಸದಾ ಸ್ಮರಣೀಯವಾದದ್ದು, ಆದ್ದರಿಂದ ಇಂದಿನ ಯುವಜನರು ಸ್ವಾಮಿ ವಿವೇಕಾನಂದರ ಚಿಂತನೆಗಳ ಬೆಳಕಿನಲ್ಲಿ ಆದರ್ಶ ಜೀವನವನ್ನು ರೂಪಿಸಿಕೊಂಡು ಭಾರತವನ್ನು ವಿಶ್ವ ಗುರು ಮಾಡಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಯುವಜನತೆಗೆ ಕರೆ ನೀಡಿದರು.ಈ ಪ್ರವಚನ ಕಾರ್ಯಕ್ರಮಕ್ಕೆ ಮೊದಲು ಪೂಜ್ಯ ಮಾತಾಜೀ ತ್ಯಾಗಮಯೀ ಅವರು ವಿದ್ಯಾರ್ಥಿಗಳಿಗೆ “ಧ್ಯಾನ” ಹಾಗೂ ಶ್ರೀಶಾರದಾಶ್ರಮದ ಸ್ವಯಂಸೇವಕ ಯತೀಶ್ ಎಂ ಸಿದ್ದಾಪುರ ಅವರು ವಿದ್ಯಾರ್ಥಿಗಳಿಗೆ ಭಜನೆಗಳನ್ನು ಹೇಳಿಕೊಟ್ಟರು.ಈ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ವನಜಾಕ್ಷಿ ಮೋಹನ್, ಯಶೋಧಾ ಪ್ರಕಾಶ್, ರಶ್ಮಿ ವಸಂತ, ಯತೀಶ್ ಎಂ ಸಿದ್ದಾಪುರ, ಡಾ.ಭೂಮಿಕ, ಸಂತೋಷಕುಮಾರ್, ಚೇತನ್, ಮಾನ್ಯ, ಪುಷ್ಪ, ಸುಕೃತಿ, ಪ್ರೇಮಕುಮಾರ್, ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

