“ಆಧ್ಯಾತ್ಮಿಕ ಮಾರ್ಗದಿಂದ ಶಾಶ್ವತ ಸುಖ-ಶಾಂತಿ ಪ್ರಾಪ್ತಿ”:-ಮಾತಾಜೀ ತ್ಯಾಗಮಯೀ. ನಾಯಕನಹಟ್ಟಿ:- ಮಾನವ ಲೌಕಿಕ ಜೀವನದ ಕ್ಷಣಿಕ ಸುಖಕ್ಕಾಗಿ ಆಸೆ ಪಡದೆ ಆಧ್ಯಾತ್ಮಿಕ ಮಾರ್ಗದಿಂದ ಮಾತ್ರ ಶಾಶ್ವತ ಸುಖ-ಮನಶಾಂತಿ ಪಡೆಯಲು ಸಾಧ್ಯ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅಭಿಪ್ರಾಯಪಟ್ಟರು. ನಗರದ ವಿದ್ಯಾ ವಿಕಾಸ ಶಾಲೆಯ ಆವರಣದಲ್ಲಿ ನಿವೃತ್ತ ಹಿಂದಿ ಭಾಷಾ ಶಿಕ್ಷಕ “ಪಿ.ಎಂ.ಶಿವಲಿಂಗಮೂರ್ತಿ ಅವರ 90ನೇ ವರ್ಷದ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ” ಆಯೋಜಿಸಿದ್ದ ವಿಶೇಷ ಸತ್ಸಂಗ ಮತ್ತು ಉಪನ್ಯಾಸ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಧ್ಯಾನಾಭ್ಯಾಸ ಮಾಡಿಸಿ ಆಶೀರ್ವಚನ ನೀಡಿದರು. ಭಗವಂತನಿಗೆ ಸಮೀಪವಾಗಲು ನಾವು ಪ್ರಾರ್ಥನೆಯನ್ನು- ವಿವಿಧ ಸ್ತೋತ್ರಗಳ ಪಠಣವನ್ನು ಮತ್ತು ಭಗವಂತನಲ್ಲಿ ಶ್ರದ್ಧೆ-ನಂಬಿಕೆಯನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಪಿ.ಎಂ.ಶಿವಲಿಂಗಮೂರ್ತಿಯವರ ಬಗ್ಗೆ ಎಂ.ಟಿ.ಮಲ್ಲಿಕಾರ್ಜುನಸ್ವಾಮಿ,ಕಾಶಿನಾಥ್, ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ, ಕೆ.ಎಂ.ತಿಪ್ಪೇಸ್ವಾಮಿ, ಕೆ.ವಿ.ರಾಮಕೃಷ್ಣರೆಡ್ಡಿ, ನಿವೃತ್ತ ತಹಶೀಲ್ದಾರ್ ಎನ್ ರಘುಮೂರ್ತಿ, ಸುಗುಣಾ ಪಿ.ಎಂ ಮಾತನಾಡಿದರು. ಹೃದಯ ಆರೋಗ್ಯದ ಬಗ್ಗೆ ಚಿತ್ರದುರ್ಗದ ಕಾರ್ಡಿಲೋಜಿಸ್ಟ್ ಡಾ.ಆರ್.ಎಸ್.ಕಾರ್ತಿಕ್ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಸ್ವಾಗತ ಪರಿಚಯವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಕೆ.ಎಂ.ಶಿವಸ್ವಾಮಿ ಮಾಡಿದರೆ ನಿರೂಪಣೆಯನ್ನು ಸ್ವಾಮಿನಾಥ ಮಾಡಿದರು. ವಂದನಾರ್ಪಣೆಯನ್ನು ಶಿಕ್ಷಕಿ ಮಂಜುಳಾ ನಡೆಸಿಕೊಟ್ಟರು. ಕಾರ್ಯಕ್ರಮದ ಆರಂಭದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಎಂ ಗೀತಾ ನಾಗರಾಜ್ , ಯತೀಶ್ ಎಂ ಸಿದ್ದಾಪುರ , ಕುಮಾರಿ ಮಾನ್ಯ ಅವರಿಂದ ವಿಶೇಷ ಭಜನೆ ನಡೆಯಿತು. ಕಾರ್ಯಕ್ರಮದಲ್ಲಿ ಶತಾಯುಷಿ ಪಿ.ಎಂ‌.ಬಂಡಯ್ಯಸ್ವಾಮಿ,ರೇಣುಕಾ, ವಿಲಾಸ್,ನಾಗರಾಜ್, ಹೃತಿಕ್,ಲಕ್ಷ್ಮೀ, ಪಿ.ಎಂ.ಶಿವಲಿಂಗಮೂರ್ತಿಯವರ ಮಕ್ಕಳು , ಮೊಮ್ಮಕ್ಕಳು,ಸಂಬಂಧಿಕರು,ಅಪಾರ ಶಿಷ್ಯಸಮೂಹ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!