ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ: ಸಿದ್ಧತೆ ವೀಕ್ಷಿಸಿದ ಇ ಓ ಗಂಗಾಧರಪ್ಪ.
ನಾಯಕನಹಟ್ಟಿ : ಫೆ.27 ರಿಂದ ಮಾ.9ರವರೆಗೆ ನಡೆಯುವ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವದ ಸಕಲ ಸಿದ್ಧತೆಗಳು ಪ್ರಾರಂಭಗೊಂಡಿದ್ದು, ಜಾತ್ರೆಯನ್ನು
ಯಶಸ್ವಿಗೊಳಿಸಲು ಜಿಲ್ಲಾಡಳಿತ ಅಗತ್ಯ ಸಹಕಾರ ನೀಡಲಿದೆ ಎಂದು ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ ಕಾರ್ಯ ನಿರ್ವಹಣಾಧಿಕಾರಿ ಎಚ್ ಗಂಗಾಧರಪ್ಪ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 2026ರ ವಾರ್ಷಿಕ ಜಾತ್ರೆ ಪ್ರಯುಕ್ತ ಸೋಮವಾರದಂದು ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ರಥೋತ್ಸವಕ್ಕೆ ಪೂಜೆ ನೆರವೇರಿಸಿ ರಥಕ್ಕೆ ಹಾಕಿರುವ ಗರಿಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಗ್ರಾಮದ ಬಾಬ್ದಾರರು ರಥಕ್ಕೆ ಹಾಕಿರುವ ಗರಿಗಳನ್ನು ತೆಗೆಯುವುದರಿಂದ ಜಾತ್ರೆಯ ಪೂರ್ವ ತಯಾರಿ ಆರಂಭಗೊಂಡಿದೆ. ಅದರಂತೆ ಪಟ್ಟಣದಲ್ಲಿರುವ ಎಲ್ಲಾ ದೇವಸ್ಥಾನಗಳಿಗೆ ಸುಣ್ಣ ಬಣ್ಣ ಬಳಿಯುವ ಕಾರ್ಯ ಕೂಡ ಪ್ರಾರಂಭವಾಗಿದೆ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಾತ್ರೆಯ ಪೂರ್ವಭಾವಿ ಸಭೆ ಕೂಡ ನಡೆಸಲಾಗಿದೆ. ಅತಿ ಶೀಘ್ರದಲ್ಲಿ ಅಧಿಕಾರಿಗಳ ಪೂರ್ವಭಾವಿ ಸಭೆಯನ್ನು ನಡೆಸಲಾಗುವುದು. ಜಾತ್ರೆಗೆ ಅಗತ್ಯವಿರುವ ಎಲ್ಲಾ ಸೌಲಭ್ಯ ನೀಡಲು ಪೂರ್ವ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಯಾವುದೇ ಕೊರತೆ ಆಗದ ರೀತಿಯಲ್ಲಿ ಕ್ರಮ ವಹಿಸಲಾಗುವುದು. ಪಟ್ಟಣದ ಸುತ್ತಲೂ ಕೆರೆಕಟ್ಟೆಗಳು ತುಂಬಿರುವುದರಿಂದ ಜಾತ್ರೆಗೆ ಬರುವ ಭಕ್ತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಪಟ್ಟಣದ ಮುಖ್ಯ ರಸ್ತೆಗಳಿಗೆ ಈ ವರ್ಷ ಮೈಸೂರ್ ದಸರಾ ಮಾದರಿ ಲೈಟಿಂಗ್ ವ್ಯವಸ್ಥೆ ಕಲ್ಪಿಸಲು ಜಿಲ್ಲಾಧಿಕಾರಿಗಳ ಸೂಚನೆಯಂತೆ ವ್ಯವಸ್ಥೆ ಮಾಡಲಾಗಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆ ಇದೆ. ಬಂದಂತ ಭಕ್ತರಿಗೆ ಉಳಿದುಕೊಳ್ಳಲು ಎಸ್ ಟಿ ಎಸ್ ಆರ್ ಶಾಲಾ ಅವರಣದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಚೆಕ್ ಪೋಸ್ಟ್, ವಿದ್ಯುತ್ ದೀಪ, ಸಿಸಿ ಕ್ಯಾಮೆರಾ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಜಾತ್ರೆಗೆ ಬಂದ ಭಕ್ತರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಒದಗಿಸಲು ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಧೂಳು ಹಾಗದ ರೀತಿಯಲ್ಲಿ ಟ್ಯಾಂಕರ್ ಮೂಲಕ ನೀರು ಸಿಂಪಡಿಸುವ ವ್ಯವಸ್ಥೆ ಕೂಡ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಡಿ.ಟಿ .ತಿಪ್ಪೇಸ್ವಾಮಿ, ಡಿ ಬೋರಯ್ಯ, ಯೋಗೇಶ್ ಬೇಬಿ, ಯೋಗೇಶ್, ವಿಜಯಣ್ಣ ನಾಗರಾಜ್ ಪ್ರಕಾಶ್ ಇದ್ದರು

