ಮೃತ ಗಂಡನ ಮರಣ ಪತ್ರ ನೀಡುವ ಬದಲು ಜೀವಂತ ಹೆಂಡತಿಯ ಮರಣ ಪತ್ರ ನೀಡಿದ ಅಧಿಕಾರಿಗಳು

ಚಿತ್ರದುರ್ಗ:-ಜೀವಂತ ಮಹಿಳೆಗೆ ಮರಣ ಪ್ರಮಾಣಪತ್ರ ನೀಡಿ, ತಾನೇ ಎಸಗಿದ ಎಡವಟ್ಟನ್ನು ತುರ್ತಾಗಿ ಸರಿಪಡಿಸಿಕೊಳ್ಳುವ ಬದಲು ಸಂತ್ರಸ್ತೆಯನ್ನೇ ಅಲೆದಾಡಿಸುತ್ತಿರುವ ಮೊಳಕಾಲ್ಮುರು ತಾಲೂಕು ಆಸ್ಪತ್ರೆಯ ‘ವಿಳಂಬ ದ್ರೋಹ’ದ ವ್ಯಥೆ ಇದು!!

ಪರಿಣಾಮ ಸಂತ್ರಸ್ತ ಮಹಿಳೆ ವರ್ಷದಿಂದ ತನಗೆ ದಕ್ಕಬೇಕಾದ ವಿಧವಾ ಪಿಂಚಣಿ ಇಲ್ಲದೇ ಪರಿತಪಿಸುತ್ತಿದ್ದಾರೆ.
ತನ್ನ ಗಂಡನ ಮರಣ ದೃಢೀಕರಣ ಪತ್ರ ಇಂದು ಸಿಗಬಹುದು, ನಾಳೆ ಸಿಗಬಹುದು ಎಂದು ಅಲೆದಾಡಿ ಅಲೆದಾಡಿ ಸುಸ್ತಾಗಿರುವ ಸಂತ್ರಸ್ತ ಮಹಿಳೆ ಅಲೆದಾಡಿ ರೋಸಿ ಹೋಗಿದ್ದಾಳೆ.

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರಿನ ಸಿ.ತಿಮ್ಮರಾಜು 2024ರ ನವೆಂಬರ್ 28ರಂದು ಅನಾರೋಗ್ಯದಿಂದ ಮೃತರಾದರು. ಅವರ ಮರಣ ದೃಢೀಕರಣ ಪತ್ರಕ್ಕಾಗಿ ಪತ್ನಿ ಡಿ.ಪುಷ್ಪಾವತಿ ಅವರು ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಅರ್ಜಿ ಸಲ್ಲಿಸಿದರು.ತಿಂಗಳ ನಂತರ ಪತಿಯ ಮರಣ ದೃಢೀಕರಣ ಪತ್ರವೇನೋ ಬಂತು,ಆದರೆ ಅದರಲ್ಲಿ ಮೃತ ತಿಮ್ಮರಾಜು ಅವರ ತಾಯಿಯ ಹೆಸರೇ ತಪ್ಪಾಗಿತ್ತು. ಬೇರೆ ಸರ್ಟಿಫಿಕೇಟ್ ನೀಡುವಂತೆ ಪುಷ್ಪಾವತಿ ಮತ್ತೆ ಮನವಿ ಸಲ್ಲಿಸಿದರು.

ಒಂದೆರಡು ತಿಂಗಳ ಅಲೆದಾಟದ ನಂತರ ಮತ್ತೊಂದು ಮರಣ ದೃಢೀಕರಣ ಪತ್ರವೂ ಬಂತು. ಪುಷ್ಪಾವತಿ ಅದನ್ನು ಸರಿಯಾಗಿ ಗಮನಿಸಲಿಲ್ಲ. ಕೆಲವು ದಿನದ ನಂತರ ಸ್ವ-ಸಹಾಯ ಸಂಘಕ್ಕೆ ಸೇರಲು ಅರ್ಜಿ ಸಲ್ಲಿಸಿದರು ಅದಕ್ಕೆ ಜಾತಿ, ಆದಾಯ ಪ್ರಮಾಣಪತ್ರ ಬೇಕಾಗುತ್ತದೆ. ಹಾಗಾಗಿ ತನ್ನ ಗಂಡನ ಮರಣ ಪ್ರಮಾಣಪತ್ರವೂ ಸೇರಿದಂತೆ ಕೆಲವು ದಾಖಲೆಗಳನ್ನು ತಾಲೂಕು ಆಡಳಿತಕ್ಕೆ ಸಲ್ಲಿಸಿ, ಜಾತಿ ಪ್ರಮಾಣ ಪತ್ರ ಕೋರಿದರು. ಆಗಲೇ ಗೊತ್ತಾಗಿದ್ದು, ತಾಲೂಕು ಆಸ್ಪತ್ರೆ ತನ್ನ ಗಂಡನ ಮರಣ ದೃಢೀಕರಣ ಪತ್ರದ ಬದಲು, ಜೀವಂತವಿರುವ ತನ್ನದೇ ಹೆಸರಿಗೆ ಮರಣ ಪತ್ರ ನೀಡಿದೆ ಎಂದು!

ತನ್ನದೇ ಮರಣ ಪತ್ರವನ್ನು ನೋಡಿ ಹೌಹಾರಿದ ಪುಷ್ಪಾವತಿ ಆಸ್ಪತ್ರೆಗೆ ತೆರಳಿ ವಿಚಾರಿಸಿದರು. ಆಗ, ”ಈ ವಿಷಯ ಯಾರಿಗೂ ತಿಳಿಸಬೇಡಿ. 10-15 ದಿನದೊಳಗೆ ಸರಿಪಡಿಸಿ ನೀಡುತ್ತೇವೆ,” ಎಂದು ಅಲ್ಲಿನ ಸಿಬ್ಬಂದಿ ಭರವಸೆ ನೀಡಿ ಸಾಗಹಾಕಿದರು. ಇದೆಲ್ಲವೂ ಆಗಿ ವರ್ಷವಾಗಿದೆ. ಪುಷ್ಪಾವತಿ ಆಗಾಗ್ಗೆ ಆಸ್ಪತ್ರೆಗೆ ತೆರಳಿ ವಿಚಾರಿಸಿ, ಬರಿಗೈಲಿ ವಾಪಾಸಾಗುತ್ತಿದ್ದಾರೆ. ಮೂರು ತಿಂಗಳಿನಿಂದ ಅವರ ದೂರವಾಣಿ ಕರೆಯನ್ನೂ ಆಸ್ಪತ್ರೆ ಸಿಬ್ಬಂದಿ ಸ್ವೀಕರಿಸದೇ ಉದಾಸೀನ ಮಾಡುತ್ತಿದ್ದಾರೆ. ಮೇಲಿನ ಅಧಿಕಾರಿಗಳಿಗೆ ಹೇಳಿದರೆ ಸಿಬ್ಬಂದಿ ಮರಣ ಪತ್ರವನ್ನೇ ನೀಡುವುದಿಲ್ಲ ಎಂದು ಪುಷ್ಪಾವತಿ ಯಾರಿಗೂ ಈ ಬಗ್ಗೆ ದೂರು ನೀಡಿಲ್ಲ!

ಈ ನಡುವೆ ಪುಷ್ಪಾವತಿ ಅವರು ಸಂಡೂರು ತಾಲೂಕು ತೋರಣಗಲ್ ಗೆ ತೆರಳಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಅವರ ಮಗ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ.ಆದ್ರೆ ಇವರ ಹೆಸರಲ್ಲಿದ್ದ ರೇಷನ್ ಕಾರ್ಡ್ ಕೂಡ ರದ್ದಾಗಿದೆ ಇದರಿಂದಾಗಿ ತಿಂಗಳ ರೇಷನ್ ಕೂಡ ಬರುತ್ತಿಲ್ಲ ಹೀಗಾಗಿ ಈ ಮಹಿಳೆ ಸಾಕಷ್ಟು ಸಮಸ್ಯೆಗಳು ಎದುರಿಸುತ್ತಿದ್ದು ತನ್ನ ಜೀವನ ಸಾಗಿಸಲು ಖಾಸಗಿ ಕಂಪನಿಯಲ್ಲಿ ಸೇರಿಕೊಂಡಿದ್ದಾಳೆ. ಆಸ್ಪತ್ರೆಯ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದಾಗಿ ಕಳೆದೊಂದು ವರ್ಷದಿಂದ ಆಸ್ಪತ್ರೆಗೆ ಅಲೆದಾಟ ನಡೆಸಿ ರೋಸಿ ಹೋಗಿದ್ದಾಳೆ.

About The Author

Namma Challakere Local News
error: Content is protected !!