ಚಳ್ಳಕೆರೆ ತಾಲೂಕು ಆರ್ಥಿಕವಾಗಿ ಸದೃಢವಿಲ್ಲದಿದ್ದರು ಕಲೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಶ್ರೀಮಂತವಾಗಿದೆ ಶಾಸಕ ಟಿ ರಘುಮೂರ್ತಿ ಬಣ್ಣನೆ
ಚಳ್ಳಕೆರೆ: ಕನ್ನಡ ನಾಡಿನ ಕಲೆ ಸಾಹಿತ್ಯ ಸಂಸ್ಕೃತಿ ಹಾಗೂ ಸಾಂಸ್ಕೃತಿಕ ಕಲೆಗಳನ್ನು ಪೋಷಿಸುವ ದೃಷ್ಟಿಯಿಂದ ಸರ್ಕಾರ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಶಾಸಕ ಟಿ ರಘುಮೂರ್ತಿ ತಿಳಿಸಿದರು.
ನಗರದ ಎಚ್ ಪಿ ಪಿ ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹೆಚ್.ಪಿ.ಪಿ.ಸಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಂದಿನ ವೇಗದ ಬದುಕಿನಲ್ಲಿ ಯುವ ಸಮುದಾಯ ಸಾಂಸ್ಕೃತಿಕ ಕಲೆಗಳನ್ನು ಮರೆಯುತ್ತಿದ್ದಾರೆ ಕಾಲೇಜು ವಿದ್ಯಾರ್ಥಿಗಳಿಗೆ ಗ್ರಾಮೀಣ ಭಾಗದ ಭರತನಾಟ್ಯ ಕಂಸಾಳೆ ನಾಟಕ ಸೇರಿದಂತೆ ಇತರೆ ಕಲೆಗಳನ್ನು ಪರಿಚಯಿಸುವ ಹಾಗೂ ಅವುಗಳನ್ನು ಪೋಷಿಸುವ ದೃಷ್ಟಿಯಿಂದ ಇಂತಹ ಕಾರ್ಯಕ್ರಮಗಳು ಪ್ರಯೋಜನಕಾರಿಯಾಗಿದೆ ಚಳ್ಳಕೆರೆ ತಾಲೂಕು ಆರ್ಥಿಕವಾಗಿ ಬರಗಾಲ ಎದುರಿಸುತ್ತಿದ್ದರು ಕಲೆ ಮತ್ತು ಸಂಸ್ಕೃತಿಯಲ್ಲಿ ಸದಾ ತನ್ನ ಶ್ರೀಮಂತಿಕೆಯನ್ನು ಉಳಿಸಿಕೊಂಡು ಬಂದಿದೆ ಎಂದು ಅಭಿಪ್ರಾಯಪಟ್ಟರು.
ಸಾಹಿತಿ ಕೊರಲಕುಂಟೆ ತಿಪ್ಪೆಸ್ವಾಮಿ ಮಾತನಾಡಿ ನಮ್ಮ ನಾಡಿನ ಹಾಗೂ ಬಯಲಸೀಮೆ ಸಾಹಿತ್ಯ ಸಂಸ್ಕೃತಿ ಹಾಗೂ ಜಾನಪದ ಕಲೆಗಳು ತಿಳಿಯಬೇಕಾದರೆ ಇಂತಹ ಕಾರ್ಯಕ್ರಮಗಳು ಅತ್ಯವಶ್ಯಕವಾಗಿದೆ ನಶಿಸಿ ಹೋಗುತ್ತಿರುವ ಕಲೆಗಳನ್ನು ಪೋಷಣೆ ಮಾಡುವುದು ಇಂದಿನ ಪೀಳಿಗೆಗೆ ತಿಳಿಸುವುದು ಅಗತ್ಯವಾಗಿದ್ದು ಇಂತಹ ಕಾರ್ಯಕ್ರಮಗಳಿಂದ ಹಲವಾರು ಗ್ರಾಮೀಣ ಪ್ರತಿಭೆಯ ಕಲಾವಿದರಿಗೆ ವೇದಿಕೆ ಕಲ್ಪಿಸಿದಂತಾಗುತ್ತದೆ ಶಿಕ್ಷಣ ಆಧುನಿಕರಣ ಗೊಳ್ಳುತ್ತಿರುವುದರಿಂದ ಹಾಗೂ ಯುವಜನತೆ ಮೊಬೈಲ್ ಗೆ ದಾಸರಾಗಿರುವುದರಿಂದ ಗ್ರಾಮೀಣ ಭಾಗದ ಕಲೆಗಳ ಬಗ್ಗೆ ತಿಳಿದುಕೊಳ್ಳಲು ಸಹ ಮುಂದಾಗುತ್ತಿಲ್ಲ ಸರ್ಕಾರ ಇಂತಹ ಕಾರ್ಯಕ್ರಮಗಳನ್ನು ಇನ್ನು ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ನೀಡುವ ಮೂಲಕ ಉತ್ತಮ ಅಡಿಪಾಯ ಹಾಕಬೇಕು ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಎಂ ಕೆ ದೇವಪ್ಪ ಮಾತನಾಡಿ ಚಂದ್ರ ಗ್ರಹಣ ಸೂರ್ಯ ಗ್ರಹಣ ಎಂಬ ಮೂಡನಂಬಿಕೆಗಳಿಂದ ಹೊರ ಬಂದಾಗ ಮಾತ್ರ ಮೌಡ್ಯತೆಗಳು ನಿಲ್ಲಲು ಸಾಧ್ಯ ಶಿಕ್ಷಣ ಹಾಗೂ ಸಮಾಜ ಎಷ್ಟೇ ಮುಂದುವರೆದರು ಕೆಲವು ಕಾಲ್ಪನಿಕ ನಂಬಿಕೆಗಳಿಂದ ಇಂದಿನ ಸಮಾಜ ಹಾಳಾಗುತ್ತಿದೆ ವಿದ್ಯಾರ್ಥಿಗಳು ತಮ್ಮ ಕಲೆಗಳನ್ನು ಪ್ರದರ್ಶಿಸುವ ಮೂಲಕ ತಮ್ಮಲ್ಲಿರುವ ಕೌಶಲ್ಯವನ್ನು ಪ್ರದರ್ಶಿಸಲು ಸಾಂಸ್ಕೃತಿಕ ಸೌರಭ ವೇದಿಕೆ ಕಲ್ಪಿಸಿದೆ ಸರ್ಕಾರ ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಯುವ ಜನತೆ ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಶಿಲ್ಪ , ಉಪಾಧ್ಯಕ್ಷೆ ಕವಿತಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ್,, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಯ್ಯ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪಿ.ತಿಪ್ಪೇಸ್ವಾಮಿ, ಕಾಲೇಜಿನ ಪಂಚಪಾಲ ಎಂಕೆ ದೇವಪ್ಪ ಹಿರಿಯ ಪ್ರಾಧ್ಯಾಪಕರಾದ ಡಾ. ಶಿವಾನಂದಯ್ಯ, ಸಂಚಾಲಕರಾದ ಡಾ.ಚೆನ್ನಕೇಶವ, ಡಾ.ರಾಜಕುಮಾರ್, ಖ್ಯಾತ ಕಥೆಗಾರರಾದ ತಿಪ್ಪಣ್ಣ ಮರಿಕುಂಟೆ, ಸಾಹಿತಿಗಳಾದ ಕೋರ್ಲಕುಂಟೆ ತಿಪ್ಪೇಸ್ವಾಮಿ, ಕಥೆಗಾರರ ಮೋದೂರು ತೇಜ, ಡಾ.ಚಿತ್ತಯ್ಯ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

