ಆರ್ ಸಿ ಬಿ ವಿಜಯೋತ್ಸವ ದುರಂತದಲ್ಲಿ ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಲಾಗಿದೆ.
ಮಾಜಿ ಶಾಸಕ ನೇರಲಗುಂಟೆ ತಿಪ್ಪೇಸ್ವಾಮಿ ಗಂಭೀರ ಆರೋಪ.
ನಾಯಕನಹಟ್ಟಿ : ಆರ್ ಸಿ ಬಿ ವಿಜಯೋತ್ಸವ ಸಂದರ್ಭ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಜನರು ಬಲಿಯಾದ ಪ್ರಕರಣಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಸೇರಿ ಐದು ಮಂದಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಲಾಗಿದೆ ಎಂದು ಮಾಜಿ ಶಾಸಕ ನೇರಲಗುಂಟೆ ತಿಪ್ಪೇಸ್ವಾಮಿ ಗಂಭೀರ ಆರೋಪ ಮಾಡಿದರು.
ಪಟ್ಟಣದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು ಜೂನ್ 3ರಂದು ಗುಜರಾತಿನ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ ಅಂತಿಮ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆರ್.ಸಿ.ಬಿ.ತಂಡವು ಗೆಲವು ಸಾಧಿಸಿತ್ತು. ಜನರ ಈ ಕ್ರೀಡಾಭಿಮಾನವನ್ನು ಜನಪ್ರಯತೆಯನ್ನು ತಮ್ಮ ರಾಜಕೀಯ ಲಾಭವನ್ನಾಗಿ ಪರಿವರ್ತನೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡ, ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ರವರು ಆರ್.ಸಿ.ಬಿ.ತಂಡದ ಆಟಗಾರರನ್ನು ಸರ್ಕಾರದ ವತಿಯಿಂದ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸನ್ಮಾನಿಸುವ ದಿಡೀರ್ (ದುಡುಕಿನ) ನಿರ್ಧಾರ ಕೈಗೊಂಡು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಚರಣೆ ಮಾಡಲು ನಿರ್ಧಾರ ಕೈಗೊಂಡಿದ್ದರಿಂದ ಹಾಗೂ ಲಕ್ಷಾಂತರ ಜನ ಸೇರುವ ನಿರೀಕ್ಷೆ ಇದ್ದರೂ, ಅವರ ಸುರಕ್ಷತೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರಿಂದ, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸೇರಿದ್ದ ಲಕ್ಷಾಂತರ ಜನರ ನೂಕು ನುಗ್ಗಲಿನಲ್ಲಿ ಇದುವರೆಗೂ 11 ಜನರು ಸಾವಿನಪ್ಪಿದ್ದು, 30 ಜನರಿಗಿಂತಲೂ ಹೆಚ್ಚಿನ ಜನರ ಗಾಯಗೊಂಡಿದ್ದಾರೆ.
ಈ ಘಟನೆಗೆ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ.ಪೆಹಲ್ಗಾಂ ದಾಳಿಗೆ ಇಂಟಲಿಜೆನ್ಸಿ ರಿಪೋರ್ಟ್ ಫೇಲೂರ್ ಎಂದು ಕೇಂದ್ರ ಸರ್ಕಾರವನ್ನು ದೂಷಿಸಿದ್ದಿರಿ. ಆರ್ಸಿಬಿ ವಿಜಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲು ಆಟಗಾರಿಗೆ ಆಹ್ವಾನಿಸಿದ ಮೇಲೆ ಇಂಟಲಿಜೆನ್ಸಿ ರಿಪೋರ್ಟ್ ಹೋಗಿರಲಿಲ್ಲವೇ? ಗಂಟೆಗೊಂದು ಸಾರಿ ಇಂಟಲಿಜೆನ್ಸಿ ರಿಪೋರ್ಟ್ ಸಿಗುವುದೇ ಮುಖ್ಯಮಂತ್ರಿಗಳಿಗೆ. ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ಬಂದೋಬಸ್ತಿಗೆ ಬಳಸಿಕೊಳ್ಳುವ ಕೆಲಸವನ್ನು ಮಾಡಬೇಕಾಗಿತ್ತು. ದುರಹಂಕಾರ ಹಾಗೂ ಅಹಂಕಾರದಿಂದ ಮುಗ್ಧ 11 ಜೀವಗಳನ್ನು ಬಲಿ ಪಡೆದಂತಾಗಿದೆ. ಇತಿಹಾಸದಲ್ಲಿ ಈ ರೀತಿಯ ಘಟನೆ ನಡೆದಿಲ್ಲ, ಇನ್ನೊಂದು ದಿನ ಕಾರ್ಯಕ್ರಮ ಮಾಡಬಹುದಿತ್ತು. ಇಲ್ಲವಾದರೆ ತೆರೆದ ವಾಹನದಲ್ಲಿ ವಿಮಾನ ನಿಲ್ದಾಣದಿಂದ ಮೆರವಣಿಗೆ ನಡೆಸಿದರೆ ಜನ ಸಂದಣಿ ಕಡಿಮೆ ಮಾಡಬಹುದಿತ್ತು. ಅಕ್ಕ ಪಕ್ಕದ ರಸ್ತೆಯಲ್ಲಿ ನಿಂತು ನೋಡಿ ಸಂತೋಷಪಟ್ಟು ಅಭಿಮಾನಿಗಳು ತೆರಳುತ್ತಿದ್ದರು. 11 ಜನರನ್ನು ಬಲಿಪಡೆದು ನಿಮ್ಮ ತಪ್ಪನ್ನು ಮುಚ್ಚಿಹಾಕಲು ನಿಷ್ಠ, ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಿದ್ದೀರಾ? ನಾಯಕ ಜನಾಂಗದವರು ಎನ್ನುವ ಉದ್ದೇಶದಿಂದ ಅಮಾನತ್ತು ಮಾಡಲಾಗಿದೆ. ನಾಯಕ ಜನಾಂಗದವರ ಮೇಲೆ ನಿಮಗೆ ಅಭಿಮಾನವಿಲ್ಲ.
ಕೇವಲ ವೋಟ್ಗಾಗಿ ನಾಯಕರನ್ನು ಬಳಸಿಕೊಳ್ಳುತ್ತಿದ್ದೀರಾ? ಅದೇ ರೀತಿ 187 ಕೋಟಿ ಸಚಿವ ಬಿ ನಾಗೇಂದ್ರ ಮೂಲಕ ಲೂಟಿ ಮಾಡಿಸಿ ನಂತರ ಜೈಲಿಗೆ ಕಳಿಸಿದವರು ನೀವುಗಳೇ? ಇದೆಲ್ಲಾ ನಿಮ್ಮದೇ ತಾನೆ ದುರಹಂಕಾರದಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರಲ್ಲ.ರಾಜ್ಯದ ಜನತೆಗೆ ಗೊತ್ತು, ನೀವು ಎಂಥವರು ಅಂತ ಇಂತಹ ದುರಹಂಕಾರಿ ಮುಖ್ಯಮಂತ್ರಿ ರಾಜ್ಯಕ್ಕೆ ಬೇಕಾ? ನಾಯಕ ಜನಾಂಗನ ಕಾಂಗ್ರೆಸ್ ವೋಟಿಗಾಗಿ ಪರಿವರ್ತನೆ ಮಾಡುತ್ತಿದ್ದೀರಿ. ನಾಯಕರನ್ನು ಎಲ್ಲೂ ಬೆಳೆಯಲಿಕ್ಕೆ ಬಿಡುವುದಿಲ್ಲ ನಾಯಕರ ವಿರೋಧಿ ನೀವುಗಳು. ರಾಜ್ಯದಲ್ಲಿ ಹಗರಣಗಳು ತುಂಬಿ ತುಳುಕಾಡುತ್ತಿವೆ ಮೂಡಹಗರಣ, ಅರ್ಕಾವತಿ ಸೇರಿದಂತೆ ಹಲವು ಉದಾಹರಣೆಗಳಿವೆ. 8000 ಕೋಟಿ ಅವ್ಯವಹಾರ ನಡೆದಿದೆ. ಇಷ್ಟೆಲ್ಲ ನಡೆದರೂ ಹೈಕಮಾಂಡ್ ಏನು ಮಾಡುತ್ತಿದೆ? ಇಂತಹ ದುರಹಂಕಾರಿ ಮುಖ್ಯಮಂತ್ರಿ ಈ ರಾಜ್ಯ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಬೇಕಾಗಿತ್ತಾ? ಎಂದು ಪ್ರಶ್ನಿಸಿದರು.
ಕಾಂಗ್ರೆಸಿನ ಹಿರಿಯ ಮುಖಂಡ ಜಗನ್ನಾಥ ಪೂಜಾರಿ ಹೇಳಿದ್ದರು, ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದಿರುವುದು. ಕಾಂಗ್ರೆಸ್ ಪಕ್ಷವನ್ನು ಉದ್ಧಾರ ಮಾಡಲು ಬಂದಿರುವುದಿಲ್ಲ. ನಾಯಕ ಜನಾಂಗದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪಿ ದಯಾನಂದ್ ರವರಿಗೆ ಅನ್ಯಾಯವಾಗಿದೆ. ಆದ್ದರಿಂದ ಇನ್ನು ಮುಂದೆ ನಾಯಕ ಜನಾಂಗದವರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬಾರದು ಎಂದು ಮನವಿ ಮಾಡಿಕೊಂಡರು.
ಉಪಮುಖ್ಯಮಂತ್ರಿಗಳು ರಾಜ್ಯ ಸರ್ಕಾರದ ವೈಫಲ್ಯವನ್ನು ಮುಚ್ಚಿಡಲು ಮಾಧ್ಯಮಗಳ ಮುಂದೆ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಇಡೀ ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ನೀವು ಹೇಗೆ ಆಡಳಿತ ನಡೆಸುತಿದ್ದೀರಾ? ಎಂದು. ಮುಖ್ಯಮಂತ್ರಿ ಒಂದು ಕಡೆ, ಉಪಮುಖ್ಯಮಂತ್ರಿ ಒಂದು ಕಡೆ ಹೇಗೆ ಇದೆ ನೋಡಿ ರಾಜ್ಯದ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳು ಎಂದು ಕಾಣುತ್ತಿವೆ. ಆದ್ದರಿಂದ ಪೊಲೀಸ್ ಆಯುಕ್ತಾರಾದ ಬಿ ದಯಾನಂದ್ ಸೇರಿದಂತೆ 5 ಹಿರಿಯ ಪೊಲೀಸ್ ಅಧಿಕಾರಿಗಳ ಅಮಾನತು ಆದೇಶವನ್ನು ಹಿಂಪಡೆದು ಅವರನ್ನು ಕರ್ತವ್ಯಕ್ಕೆ ನಿಯೋಜನೆಗೊಳಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮಾಜಿ ಶಾಸಕ ನೇರಲಗುಂಟೆ ತಿಪ್ಪೇಸ್ವಾಮಿ.

