ಚಳ್ಳಕೆರೆ ತಾಲೂಕು “ಬರಪೀಡಿತ ಪ್ರದೇಶ”ವೆಂದು ಘೋಷಣೆಗೆ ರೈತ ಸಂಘ ಆಗ್ರಹ
ಚಳ್ಳಕೆರೆ: ಮಳೆ ಕೊರತೆಯಿಂದ ಜುಲೈ ಮಾಸದಲ್ಲೂ ನಿಗದಿತ ಶೇಂಗಾ ಬಿತ್ತನೆ ಗುರಿ ಸಾಧನೆ ಆಗುತ್ತಿಲ್ಲ. ಈಗಾಗಲೇ ಮುಂಗಾರು ಸಂಪೂರ್ಣ ಹಿನ್ನಡೆಯಾಗಿದೆ. ಇದರಿಂದ ರೈತಾಪಿ ವರ್ಗ ಮುಗಿಲಿನಂತ ನೋಡುವಂತಾಗಿದೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಹೇಳಿದರು.
ಮುಂಗಾರು ಮಳೆ ಕುಂಠಿತವಾಗಿರುವ ಕಾರಣ, ಚಳ್ಳಕೆರೆಯನ್ನು ಸರ್ಕಾರ ಈ ಕೂಡಲೇ ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು ಎಂದು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸುವುದಾಗಿ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕೃಷಿ ಚಟುವಟಿಕೆಗಳಿಂದ ಹಿಂದೆ ಸರಿಯುವಂತಾಗಿದೆ ಎಂದು ತಾಲೂಕನ್ನು ಬರಪೀಡಿತ ಎಂದು ಘೋಷಿಸಿ, ಕಳೆದ ವರ್ಷ ಬಾಕಿ ಉಳಿಸಿಕೊಂಡಿರುವ 7 ಕೋಟಿ ವಿಮೆ ಹಣವನ್ನು ಬಿಡುಗಡೆ ಮಾಡಬೇಕು.
ಇತ್ತೀಚೆಗೆ ಅತಿವೃಷ್ಠಿ ಮಳೆಯಿಂದ ಬೆಳೆ ನಷ್ಟ ಮಾಡಿಕೊಂಡ ರೈತರಿಗೆ ಬೆಳೆ ಪರಿಹಾರ ಹಣವನ್ನು ದುರುಪಯೋಗ ಮಾಡಿಕೊಂಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಜಿ.ಎಚ್. ಹನುಮಂತಪ್ಪ, ಚನ್ನಕೇಶವ, ಸಣ್ಣ ಪಾಲಯ್ಯ, ಪೂಜಾರಿ ಚಂದ್ರಣ್ಣ, ಜಯಣ್ಣ, ತಿಪ್ಪೇಸ್ವಾಮಿ, ರಾಜಣ್ಣ ಇತರರಿದ್ದರು.