ಚಳ್ಳಕೆರೆ : ಸಾಂಸ್ಕೃತಿಕ ಕಾರ್ಯಕ್ರಮಗಳ ಹವ್ಯಾಸದಿಂದ ಸಮಾಜದಲ್ಲಿ ಜಾನಪದ ಕಲೆ ಮತ್ತು ಸಂಸ್ಕೃತಿಯ ಪೋಷಣೆಗೆ ಆಧಾರ ಎಂದು ಹಿರಿಯ ಕತೆಗಾರ ತಿಪ್ಪಣ್ಣ ಮರಿಕುಂಟೆ ಹೇಳಿದರು.
ತಾಲೂಕಿನ ದೇವರಮರಿಕುಂಟೆ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಗಿರಿಜನ ವಿದ್ಯಾಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾದೇಶಿಕ ಕಲೆ ಮತ್ತು ಸಂಸ್ಕೃತಿಯನ್ನು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಕಾಣುತ್ತೇವೆ. ವಿದ್ಯಾರ್ಥಿಗಳು ಮತ್ತು ಆಸಕ್ತ ಕಲಾವಿದರು ನೆಲಮೂಲದ ಕಲೆಯನ್ನು ಆಸ್ವಾದಿಸುವ ಮತ್ತು ಅಭಿನಯಿಸುವ ಆಸಕ್ತಿ ಬೆಳೆಸಿಕೊಳ್ಳಬೇಕು. ಭಾಷೆ ಮತ್ತು ಕಲೆಯನ್ನು ಸಾಂಸ್ಕೃತಿಕ ಕಲಾವಂತಿಕೆಯಲ್ಲಿ ನಾಡಿನ ವೈಭವತೆ ಮೆರೆಯಬೇಕಿದೆ. ವಿದ್ಯಾರ್ಥಿ ದಿಸೆಯಲ್ಲಿ ಪಠ್ಯೇತರ ಚಟುವಟಿಕೆಗಳ ಆಸಕ್ತಿ ಇರಬೇಕು. ಇದರಿಂದ ಸಮಾಜದ ಜವಾಬ್ದಾರಿ ಮತ್ತು ಕಲಾ ಪರಂಪರೆ ತಿಳಿದುಕೊಳ್ಳಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಡಿ. ಭೂಲಿಂಗಪ್ಪ ಮಾತನಾಡಿ, ಗ್ರಾಮೀಣ ಜನ ಜೀವನದ ಸಂಸ್ಕೃತಿ ಸಾಹಿತ್ಯ ಮತ್ತು ಜನಪದ ಕತೆಗಳಿಗೆ ಭೂಮಿಕೆ ಇದ್ದಂತೆ. ಹಿರಿಯರ ಕಾಲದಲ್ಲಿ ರಾಮಾಯಣ ಮಹಾಭಾರತ ಕಥಾ ಸಾರವನ್ನು ನಿರರ್ಗಳವಾಗಿ ಹೇಳುವ ಬೌದ್ದಿಕತೆ ಇತ್ತು. ಅದೇ ರೀತಿ ರಂಗ ಮಂಟಪಗಳಲ್ಲಿ ಪ್ರದರ್ಶನ ಮಾಡುವ ಕಲಾಶ್ರೀಮಂತಿಕೆ ಇತ್ತು. ಬದಲಾದ ಸಮಾಜದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮರೆಯಾಗುತ್ತಿರುವುದು ವಿಷಾದನೀಯ. ಸುಗ್ಗಿ, ಸಂಭ್ರಮಗಳಲ್ಲಿ ಕಷ್ಟದ ಕೆಲಸಗಳಲ್ಲೂ ಕಲಾ ಚಟುವಟಿಕೆಗಳ ಮೂಲಕ ಖುಷಿಪಡುತ್ತಿದ್ದ ಜನ ಜೀವನ ಈಗ ಇಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು. ಗಡಿಭದ್ರತಾ ಪಡೆ ನಿವೃತ್ತ ಅಧಿಕಾರಿ ಡಿ. ರಾಮಲಿಂಗಪ್ಪ, ಗ್ರಾಪಂ ಮಾಜಿ ಸದಸ್ಯ ಪೂಜಾರಿ ಗೋವಿಂದಪ್ಪ, ಮುಖ್ಯಶಿಕ್ಷಕ ದೊಡ್ಡಯ್ಯ, ಸಹ ಶಿಕ್ಷಕ ಕೋಡಪ್ಪ, ಹನುಮಂತರಾಯ, ಮಂಜುನಾಥ, ಮಹಾಂತೇಶ ಮತ್ತಿತರರು ಇದ್ದರು.
ಪೋಟೋ: ತಾಲೂಕಿನ ದೇವರಮರಿಕುಂಟೆ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಗಿರಿಜನ ವಿದ್ಯಾಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾಹಿತಿ ತಿಪ್ಪಣ್ಣ ಮರಿಕುಂಟೆ ಅತಿಥಿಗಳನ್ನು ಅಭಿನಂದಿಸಿದರು.

Namma Challakere Local News
error: Content is protected !!