ಬೆಂಗಳೂರು: 224 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಗಾಗಿ ಅಭಿಪ್ರಾಯ ಸಂಗ್ರಹಿಸಲು ಬಿಜೆಪಿ ಎಲ್ಲ ಜಿಲ್ಲೆಗಳಿಗೂ ತನ್ನ ತಂಡಗಳನ್ನು
ಶುಕ್ರವಾರ ಕಳುಹಿಸಲಿದೆ.

ಚುನಾವಣೆ ಮಾದರಿಯಲ್ಲಿ ಅಭಿಪ್ರಾಯ ಸಂಗ್ರಹ
ಕಾರ್ಯ ಒಂದೇ ದಿನ ನಡೆಯಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ಮೂವರು ಸಂಭಾವ್ಯ ಅಭ್ಯರ್ಥಿಗಳ
ಹೆಸರುಗಳನ್ನು ಬರೆದು ಮತ ಪಟ್ಟಿಗೆಗೆ ಹಾಕಬೇಕು. ಮೊದಲ ಆದ್ಯತೆ,
ಎರಡನೇ ಮತ್ತು ಮೂರನೇ ಆದ್ಯತೆಯ ಹೆಸರುಗಳನ್ನು ಸೂಚಿಸಬೇಕು. ಇದು
ಗೋಪ್ಯವಾಗಿ ನಡೆಯಲಿದೆ. ಈ ಪ್ರಕ್ರಿಯೆಯಲ್ಲಿ ಸುಮಾರು 18 ಸಾವಿರ ಮಂದಿ
ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿಯ ನಾಯಕರೊಬ್ಬರು ತಿಳಿಸಿದರು.

ಈ ಸಭೆಗೆ ಶಕ್ತಿ ಕೇಂದ್ರದ ಪ್ರಮುಖರು, ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಮಂಡಲ ಕೋರ್ ಸಮಿತಿ ಸದಸ್ಯರು,
ಮಂಡಲ ಪದಾಧಿಕಾರಿಗಳು, ಮಂಡಲ ಮೋರ್ಚಾಗಳ ಅಧ್ಯಕ್ಷರು, ಮಂಡಲದಲ್ಲಿರುವ ಜಿಲ್ಲೆ, ರಾಜ್ಯ, ಪ್ರಕೋಷ್ಠಗಳ ಸಂಚಾಲಕರು, ಮೋರ್ಚಾಗಳ ಜಿಲ್ಲಾ
ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಜಿ.ಪಂ, ತಾ.ಪಂ.ಗಳ ಹಾಲಿ ಮತ್ತು
ಮಾಜಿ ಸದಸ್ಯರು, ಸ್ಥಳೀಯ ಸಂಸ್ಥೆಗಳ ಸದಸ್ಯರು, ಹಾಲಿ ಮತ್ತು ಮಾಜಿ ಶಾಸಕರು, ಪರಿಷತ್ ಸದಸ್ಯರು, ಹಾಲಿ ಮತ್ತು ಮಾಜಿ ಸಂಸದರು, ಕಳೆದ ಬಾರಿ
ಪರಾಜಿತ ಅಭ್ಯರ್ಥಿಗಳು ಅಭಿಪ್ರಾಯ ಸಂಗ್ರಹ ಕಾರ್ಯದಲ್ಲಿ ಭಾಗವಹಿಸಲು
ಸೂಚಿಸಲಾಗಿದೆ. ಇವರೆಲ್ಲರೂ ಮತ ಚಲಾಯಿಸಲಿದ್ದಾರೆ ಎಂದರು.

ಹಿಂದೆಂದೂ ಇತರ ಯಾವುದೇ ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ಈ
ಮಾದರಿಯನ್ನು ಅನುಸರಿಸಿಲ್ಲ. ಆಂತರಿಕವಾಗಿ ಸಂಗ್ರಹಿಸಿದ ಅಭಿಪ್ರಾಯವನ್ನು
ಏ.1 ಅಥವಾ 2 ರಂದು ನಡೆಯುವ ಬಿಜೆಪಿ ಪ್ರಮುಖ ನಾಯಕರ ಸಭೆಯಲ್ಲಿ
ಮಂಡಿಸಲಾಗುವುದು. ಇದರ ಆಧಾರದ ಮೇಲೆ ಸಂಭಾವ್ಯ ಅಭ್ಯರ್ಥಿಗಳ
ಪಟ್ಟಿಯನ್ನು ಕಳುಹಿಸಲಾಗುವುದು. ಏ.4 ರಂದು ಕೇಂದ್ರೀಯ ಚುನಾವಣಾ
ಸಮಿತಿ ಸಭೆ ನಡೆಯುವ ಸಾಧ್ಯತೆ ಇದೆ.
ಬಿಜೆಪಿಯ 36 ಸಂಘಟನಾತ್ಮಕ ಜಿಲ್ಲೆಗಳಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ
3 ರವರೆಗೆ ಮತ ಚಲಾವಣೆ ರೂಪದಲ್ಲಿ ಅಭ್ಯರ್ಥಿಗಳ ಹೆಸರು ಸೂಚಿಸಬೇಕು.
ಯಾರಿಗೆ ಹೆಚ್ಚು ಮತ ಸಿಗುತ್ತದೆಯೋ ಅವರಿಗೆ ಅವಕಾಶ ಹೆಚ್ಚು. ಇದರಿಂದ
ಅನಗತ್ಯ ಬಂಡಾಯ, ಗಲಾಟೆಯನ್ನು ತಪ್ಪಿಸಬಹುದು ಎಂಬ ಪ್ರಯೋಗಕ್ಕೆ
ಬಿಜೆಪಿ ಕೈ ಹಾಕಿದೆ ಎಂದು ಅವರು ಹೇಳಿದರು.

About The Author

Namma Challakere Local News
error: Content is protected !!