ಚಿತ್ರದುರ್ಗ(ಚಳ್ಳಕೆರೆ): ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ಸಂಗ್ರಹ, ವಿಲೇವಾರಿಯನ್ನು ವೈಜ್ಞಾನಿಕ ಹಾಗೂ ವ್ಯವಸ್ಥಿತವಾಗಿ ಮಾಡಲು ತ್ಯಾಜ್ಯ ನಿರ್ವಹಣೆ ಹೊಣೆಯನ್ನು ಸ್ಥಳೀಯ ಸ್ವಸಹಾಯ ಸಂಘಗಳ ಮಹಿಳೆಯರಿಗೆ ವಹಿಸಲು ಜಿಲ್ಲಾ ಪಂಚಾಯಿತಿ ಸಿದ್ಧತೆ ಇದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿವಾಕರ್ ಹೇಳಿದರು.
ಜಿಲ್ಲಾ ಪಂಚಾಯತ್, ನರೇಗಾ ಸೇರಿದಂತೆ ವಿವಿಧ ಯೋಜನೆಯಡಿಯಲ್ಲಿ ಜಿಲ್ಲಾ ಸಂಪನ್ಮೂಲ ಕೇಂದ್ರದಲ್ಲಿ ಸ್ವ ಸಹಾಯ ಗುಂಪಿನ ಸದಸ್ಯರಿಗೆ ಆಯೋಜಿಸಿರುವ ಘನ ತ್ಯಾಜ್ಯ ನಿರ್ವಹಣೆ ಮತ್ತು ಕಾರ್ಯಾಚರಣೆ ಕುರಿತು ತರಬೇತಿ ಕಾರ್ಯಗಾರದಲ್ಲಿ ಉಪನ್ಯಾಸ ನೀಡಿದರು.
ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಕಸ ಸಂಗ್ರಹಣೆ ಹಾಗೂ ನಿರ್ವಹಣೆಯನ್ನು ಸ್ಥಳಿಯ ಸ್ವಸಹಾಯ ಸಂಘಗಳ ನಡುವೆ ಒಪ್ಪಂದ ಮಾಡಿಕೊಳ್ಳಲು ಜಿಲ್ಲಾ ಪಂಚಾಯಿತಿ ಯೋಜನೆ ರೂಪಿಸಿದೆ.
ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ಗ್ರಾಮೀಣ ಭಾಗಗಳಲ್ಲಿ ಕಸವನ್ನು ಮೂಲದಲ್ಲೇ ಹಸಿ ಕಸ, ಒಣ ಕಸ ಎಂದು ವಿಂಗಡಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು.
ತ್ಯಾಜ್ಯದ ವೈಜ್ಞಾನಿಕ ನಿರ್ವಹಣೆಗಾಗಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ‘ತ್ಯಾಜ್ಯ ನಿರ್ವಹಣಾ ಘಟಕಗಳು ನಿರ್ಮಾಣವಾಗುತ್ತಿದ್ದು ಗ್ರಾಮೀಣ ಭಾಗಗಳಲ್ಲಿ ಕಸ ಸಂಗ್ರಹಣೆ ವ್ಯವಸ್ಥಿತವಾಗಿ ಆಗುತ್ತಿಲ್ಲ. ಜನರು ಮೂಲದಲ್ಲೇ ಕಸವನ್ನು ಬೇರ್ಪಡಿಸುತ್ತಿಲ್ಲ. ಹಸಿ ಹಸ, ಒಣ ಕಸವನ್ನು ಎಲ್ಲವನ್ನೂ ಒಟ್ಟಾಗಿ ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ.
ಹೀಗಾಗಿ ವಿಲೇವಾರಿಯೂ ಸಮರ್ಪಕವಾಗಿ ನಡೆಯುತ್ತಿಲ್ಲ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಕಸ ವಿಲೇವಾರಿಯನ್ನು ವ್ಯವಸ್ಥಿತವಾಗಿ ಮಾಡಲು ಸರ್ಕಾರ ಯೋಜನೆ ರೂಪಿಸಿದ್ದು, ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸ್ವಸಹಾಯ ಗುಂಪುಗಳ ಮಹಿಳೆಯರನ್ನು ಬಳಸಿಕೊಳ್ಳಲು ಚಿಂತನೆ ನಡೆಸಿ ತರಬೇತಿ ನೀಡಲಾಗುತ್ತಿದೆ.
ಕಸ ನಿರ್ವಹಣೆಯನ್ನು ಯಾವ ರೀತಿ ಮಾಡಬೇಕು? ಕಸದ ವಿಂಗಡಣೆ, ಅವುಗಳಿಂದ ಗೊಬ್ಬರ ತಯಾರಿಕೆ, ತ್ಯಾಜ್ಯದಿಂದಲೂ ಹೇಗೆ ಆದಾಯ ಕಂಡುಕೊಳ್ಳಬಹುದು ಎಂಬುದರ ಅರಿವುದಕ್ಕಾಗಿ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಜಿಲ್ಲಾ ಪಂಚಾಯಿತಿಯು ತರಬೇತಿ ಆಯೋಜಿಸಿದೆ.
ಮಹಿಳಾ ಸದಸ್ಯರು ತರಬೇತಿಯನ್ನು ಪಡೆದು ನಿಮ್ಮೂರಿನ ಘನ ತ್ಯಾಜ್ಯವನ್ನು ಸಂಗ್ರಹಿಸುವ ಮೂಲಕ ಸುಂದರ ಪರಿಸವನ್ನು ಕಾಪಾಡಲು ಸಹಕಾರಿಯಾಗುತ್ತದೆ ಎಂದು ಜಿಪಂ ಸಿಇಒ ದಿವಾಕರ್ ಹೇಳಿದರು.
ಈ ಸಂದರ್ಭದಲ್ಲಿ ಜಿಪಂ ಯೋಜನಾಧಿಕಾರಿ ಮಹಂತೇಶ್ ಇತರರಿದ್ದರು.

Namma Challakere Local News
error: Content is protected !!