ಪರಿಶ್ರಮದ ಸಾಧನೆಯನ್ನು ಸಮಾಜ ಗೌರವಿಸುತ್ತದೆ – ಕೆ.ಎಂ.ಶಿವಸ್ವಾಮಿ
ಚಳ್ಳಕೆರೆ : ಯಾವುದೇ ಒಬ್ಬ ಮನುಷ್ಯ ಪ್ರಬುಧ್ದನಾಗಬೇಕಾದರೆ ಅವನಲ್ಲಿ ಶ್ರದ್ಧೆ ಮತ್ತು ಸತತ ಪರಿಶ್ರಮದ ಮೂಲಕ ಸಾಧನೆಯಲ್ಲಿ ಮೆಟ್ಟಿ ನಿಲ್ಲದಬಹುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಹೇಳಿದರು.
ನಗರದ ಬಳ್ಳಾರಿ ರಸ್ತೆಯ ಸರ್ಕಾರಿ ಜಿ.ಟಿ.ಟಿ.ಸಿ.ಕೇಂದ್ರದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸರ್.ಎಂ.ವಿಶ್ವೇಶ್ವರಯ್ಯರವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ತಮ್ಮಲ್ಲಿರುವ ಅಪಾರವಾದ ಜ್ಞಾನದ ಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡು ಸಂಶೋಧನೆಯ ಮೂಲಕ ಸಾಗಿ ಮುಂದಿನ ದಿನಗಳಲ್ಲಿ ಉನ್ನತವಾದುದನ್ನು ಸಾಧಿಸಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಕಿವಿ ಮಾತು ಹೇಳಿದರು.
ತಹಶೀಲ್ದಾರ್ ಎನ್.ರಘುಮೂರ್ತಿ, ಬಡತನದ ಬವಣೆಯಲ್ಲೇ ಬೆಂದು ಬೆಳೆದ ಸರ್.ಎಂ.ವಿಶ್ವೇಶ್ವರಯ್ಯರವರು, ಬದುಕಿನಲ್ಲಿ ಅವರು ರೂಢಿಸಿಕೊಂಡಿದ್ದ ಸಮಯ ಪರಿಪಾಲನೆ, ಶಿಸ್ತುಬದ್ಧ ಜೀವನ ಹಾಗೂ ಸಾಮಾಜಿಕ ಬದ್ಧತೆ ಇಂದಿನ ಯುವ ತಂತ್ರಜ್ಞರಿಗೆ ಮಾದರಿಯಾಗಿದೆ. ನಾಡಿನಲ್ಲಿ ವಿಜ್ಞಾನ, ತಂತ್ರಜ್ಞಾನ, ಕೃಷಿ, ಆರ್ಥಿಕತೆ, ಕಲೆ ಹಾಗೂ ಸಾಹಿತ್ಯ ಮುಂತಾದ ಕ್ಷೇತ್ರಕ್ಕೆ ವಿಶ್ವೇಶ್ವರಯ್ಯರವರು ಸಲ್ಲಿಸಿದ ಸೇವೆ ಅನನ್ಯವಾದುದು ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ, “ಬಡತನದ ನೆಪದಲ್ಲಿ ವಿದ್ಯೆಯನ್ನು ಮೊಟುಕುಗೊಳಿಸಿಕೊಳ್ಳಬಾರದು. ದೊರೆಯುವ ಸೌಲಭ್ಯವನ್ನು ಬಳಸಿಕೊಳ್ಳುವುದರ ಜತೆಗೆ ವಿಶ್ವೇಶ್ವರಯ್ಯರವರ ಬದುಕು ಮತ್ತು ಸಾಧನೆಯನ್ನು ಸ್ಫೂರ್ತಿಯಾಗಿಟ್ಟುಕೊಂಡು ಸಾಧಿಸಬೇಕು” ಎಂದು ಯುವಜನತೆಗೆ ಸಲಹೆ ನೀಡಿದರು.
ಎಚ್.ಪಿ.ಪಿ.ಸಿ.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ.ಎಂ.ಕೃಷ್ಣೇಗೌಡ, ಮುಂಬತ್ತಿ ಬೆಳಕಿನಲ್ಲಿ ಕಲಿತ ತಂತ್ರಜ್ಞಾನ ಕೌಶಲ್ಯದಿಂದ ಯಂತ್ರವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡು ಜಗತ್ತಿಗೆ ಬೆಳಕಾದ ಧೀಮಂತ ವ್ಯಕ್ತಿ ಸರ್.ಎಂ.ವಿಶ್ವೇಶ್ವರಯ್ಯನವರು ಎಂದು ವಿಶೇಷ ಉಪನ್ಯಾಸ ನೀಡಿದರು.