ವೀರಶೈವ ಲಿಂಗಾಯತ ಸಮುದಾಯಕ್ಕೆ ಭೀಮಣ್ಣ ಖಂಡ್ರೆ ಕೊಡುಗೆ ಅಪಾರ…!
ಲಿಂ. ಭೀಮಣ್ಣ ಖಂಡ್ರೆ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಹಾಸಭಾ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ ಹೇಳಿಕೆ
ಚಿತ್ರದುರ್ಗ:
ನಗರದ ದಾವಣಗೆರೆ ರಸ್ತೆಯಲ್ಲಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಕಚೇರಿಯಲ್ಲಿ ಮಹಾಸಭಾದ ರಾಷ್ಟ್ರೀಯ ಗೌರವ ಅಧ್ಯಕ್ಷರಾದ ಲಿಂಗೈಕ್ಯ ಶ್ರೀ ಭೀಮಣ್ಣ ಖಂಡ್ರೆಯವರ ಶ್ರದ್ಧಾಂಜಲಿ ಸಭೆ ನಡೆಯಿತು.
ಚಿತ್ರದುರ್ಗ ಜಿಲ್ಲಾ ಅಧ್ಯಕ್ಷ ಮಹಡಿ ಶಿವಮೂರ್ತಿ ಮಾತನಾಡಿ, ವೀರಶೈವ ಮಹಾಸಭೆ ಮಾಜಿ ಅಧ್ಯಕ್ಷರು, ಮಹಾಸಭಾಗಾಗಿ ಸದಾಶಿವನಗರದಲ್ಲಿ ಸ್ವಂತ ಕಟ್ಟಡ ಕಟ್ಟಿಸಿಕೊಟ್ಟಂತ ಪುಣ್ಯಾತ್ಮ ಮಾಜಿ ಸಚಿವರಾದ ಲಿಂ. ಭೀಮಣ್ಣ ಖಂಡ್ರೆಯವರು ಶತಾಯುಷಿಗಳಾಗಿ (102) ವಯೋ ಸಹಜರಾಗಿ ನಿಧನರಾಗಿದ್ದು, ಅಖಿಲ ಭಾರತ ವೀರಶೈವ ಮಹಾಸಭೆಯ ಚಿತ್ರದುರ್ಗ ಜಿಲ್ಲೆಯ ಎಲ್ಲಾ ಘಟಕಗಳು ತೀವ್ರ ಸಂತಾಪ ವ್ಯಕ್ತಪಡಿಸುತ್ತಿದ್ದೇವೆ ಎಂದರು.
ನಾಲ್ಕು ಸಲ ಶಾಸಕರಾಗಿ, ಎರಡು ಸಲ ವಿಧಾನ ಪರಿಷತ್ ಸದಸ್ಯರಾಗಿದ್ದ ಭೀಮಣ್ಣ ಖಂಡ್ರೆ ಅವರು ಎಂ. ವೀರಪ್ಪ ಮೊಯ್ಲಿ ಅವರ ಸಂಪುಟದಲ್ಲಿ ಸಾರಿಗೆ ಸಚಿವರಾಗಿ ಕೆಲಸ ನಿರ್ವಹಿಸಿದ್ದರು. ಸಮಾಜವಾದಿ ಪಕ್ಷದ ಕಾರ್ಯಕರ್ತರಾಗಿ ರಾಜಕೀಯ ಜೀವನ ಆರಂಭಿಸಿದ ಅವರು, 1953ರಲ್ಲಿ ಭಾಲ್ಕಿ ಪುರಸಭೆ ಅಧ್ಯಕ್ಷರಾಗಿದ್ದರು ಎಂದರು.
ವೀರಶೈವ ಲಿಂಗಾಯತ ಸಮುದಾಯದ ಮುಖಂಡ ಜ್ಞಾನ ಮೂರ್ತಿ ಮಾತನಾಡಿ, ಡಾ. ಭೀಮಣ್ಣ ಖಂಡ್ರೆ ವೀರಶೈವ-ಲಿಂಗಾಯತ ಧರ್ಮಕ್ಕೆ ಮಾರ್ಗದರ್ಶಕ ಶಕ್ತಿಯಾಗಿ ನಿಂತವರು. 1999ರಲ್ಲಿ ಅವರು ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ನಂತರ ಸಂಸ್ಥೆಗೆ ಹೊಸ ಖದರ್ ತಂದುಕೊಟ್ಟರು. ಈ ಅವಧಿಯಲ್ಲಿ ದೇಶಾದ್ಯಂತ ಇರುವ ವೀರಶೈವ ಸಮಾಜದ ಜನರನ್ನು ಸಂಘಟಿಸುವಲ್ಲಿ ಯಶಸ್ವಿಯಾದರು. ಮಹಾಸಭೆಯ ಇತಿಹಾಸದಲ್ಲೇ ಇವರ ಅವಧಿ ಅತ್ಯಂತ ಕ್ರಿಯಾಶೀಲ ಮತ್ತು ಸಂಘಟನಾತ್ಮಕವಾಗಿತ್ತು. ಸಮಾಜದ ಒಳಗಿನ ಉಪಜಾತಿಗಳ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಎಲ್ಲರನ್ನೂ ಒಂದೇ ಸೂರಿನಡಿ ತರುವಲ್ಲಿ ಹಗಲಿರುಳು ಶ್ರಮಿಸಿದರು. ಬೆಂಗಳೂರಿನ ಸದಾಶಿವ ನಗರದಲ್ಲಿ ವೀರಶೈವ ಮಹಾಸಭೆಯ ಭವ್ಯ ಕಟ್ಟಡದ ನಿರ್ಮಾಣ ಮತ್ತು ಸಂಘಟನೆಯ ಆರ್ಥಿಕ ಸ್ವಾವಲಂಬನೆಗೆ ಭದ್ರ ಬುನಾದಿ ಹಾಕಿದರು. ಹೊಸ ಪೀಳಿಗೆಯ ಯುವಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲು ಮಹಾಸಭೆಯ ಮೂಲಕ ಅನೇಕ ವಿದ್ಯಾರ್ಥಿನಿಲಯಗಳನ್ನು ಆರಂಭಿಸಿದರು ಎಂದರು.
ಚಿತ್ರದುರ್ಗ ನಗರ ಘಟಕದ ಉಪಾಧ್ಯಕ್ಷ ಜೀತೇಂದ್ರ ಹುಲಿಕುಂಟೆ ಮಾತನಾಡಿ, ಭೀಮಣ್ಣ ಖಂಡ್ರೆ ಯವರ ನಾಯಕತ್ವದಲ್ಲಿ ವೀರಶೈವ ಮಹಾಸಭೆಯು ಕೇವಲ ಒಂದು ಧಾರ್ಮಿಕ ಸಂಸ್ಥೆಯಾಗಿ ಉಳಿಯದೆ, ಸಾಮಾಜಿಕ ಮತ್ತು ಶೈಕ್ಷಣಿಕ ಶಕ್ತಿಯಾಗಿ ರೂಪಾಂತರಗೊಂಡಿತು. ಅವರ ಭೀಮಬಲದ ನಾಯಕತ್ವ ಸಮಾಜಕ್ಕೆ ದೊಡ್ಡ ಆಸ್ತಿಯಾಗಿತ್ತು. ಲಿಂ. ಡಾ. ಭೀಮಣ್ಣ ಖಂಡ್ರೆಅವರು ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾದಾಗ ಕೇವಲ 3,000 ರಷ್ಟಿದ್ದ ಸದಸ್ಯರ ಸಂಖ್ಯೆಯನ್ನು ತಮ್ಮ ಅವಧಿಯಲ್ಲಿ ಬರೋಬ್ಬರಿ 10 ಲಕ್ಷಕ್ಕೂ ಹೆಚ್ಚು ಮಾಡುವಲ್ಲಿ ಯಶಸ್ವಿಯಾದರು. ಮಹಾಸಭೆಯ ಇತಿಹಾಸದಲ್ಲೇ ಇದು ದಾಖಲೆಯ ಸದಸ್ಯತ್ವ ಅಭಿಯಾನವಾಗಿತ್ತು. ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸಿ ಸಮಾಜದ ಜನರನ್ನು ಸಂಘಟಿಸಿ, ಮಹಾಸಭೆಯ ಧ್ವನಿ ರಾಷ್ಟ್ರಮಟ್ಟದಲ್ಲಿ ಮೊಳಗುವಂತೆ ಮಾಡಿದರು ಎಂದರು.
ಪ್ರಧಾನ ಕಾರ್ಯದರ್ಶಿ ಶಶಿಧರ್ ಬಾಬು, ಖಜಾಂಚಿ ರುದ್ರಣ್ಣ ಜಾಲಿಕಟ್ಟೆ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಮೈಲನಹಳ್ಳಿ ದಿನೇಶ್, ಯುವ ಘಟಕದ ಉಪಾಧ್ಯಕ್ಷ ಪ್ರಶಾಂತ್ ರೆಡ್ಡಿ, ಜಿಲ್ಲಾ ವಾಣಿಜ್ಯ ಘಟಕ ಅಧ್ಯಕ್ಷ ಅನಂದ್, ವೀರಶೈವ ಹರ್ಬನ್ ಬ್ಯಾಂಕ್ ಅಧ್ಯಕ್ಷ ಪಟೇಲ್ ಶಿವಕುಮಾರ್, ಶಿವಸಂಪಿ ಸಮಾಜದ ಅಧ್ಯಕ್ಷ ಜಯದೇವ ಮೂರ್ತಿ, ಮಹಾ ಸಭಾದ ಜಿಲ್ಲಾ ನಿರ್ದೇಶಕರಾದ ವೀರಭದ್ರ ಸ್ವಾಮಿ, ಪರಮೇಶ್ವರ್, ಯುವ ಘಟಕದ ನಿರ್ದೇಶಕ ಪವನ್, ಮುಖಂಡ ಪ್ರವೀಣ್ ಭರಮಸಾಗರ ಸೇರಿದಂತೆ ವೀರಶೈವ ಮಹಾಸಭಾದ ಬಂಧುಗಳು ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ, ಲಿಂ. ಭೀಮಣ್ಣ ಖಂಡ್ರೆಯವರ ಆತ್ಮಕ್ಕೆ ಶಾಂತಿ ಕೋರಿದರು.

