ನಾಯಕನಹಟ್ಟಿ:- ಸ್ಥಳೀಯ ಪೊಲೀಸ್ ಠಾಣೆಯಿಂದ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಗ್ರಾಮೀಣ ವಿದ್ಯಾ ಸಂಸ್ಥೆಯಲ್ಲಿ ಗುರುವಾರ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಪಿಎಸ್ ಐ ಜಿ.ಪಾಂಡುರಂಗಪ್ಪ ಮಾತನಾಡಿ,ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು, ಶಾಂತಿ ಕಾಪಾಡುವಂತಹ ಕೆಲಸ ಪೊಲೀಸ್‌ ಇಲಾಖೆ ಮಾಡುತ್ತದೆ ಆದರೆ ಯಾವಾಗಲು ಅಪರಾಧವನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಹಾಗೂ ಅದನ್ನು ಪತ್ತೆ ಹಚ್ಚುವಲ್ಲಿ ಸಾರ್ವಜನಿಕರ ಸಹಕಾರವೂ ಅಗತ್ಯ. ಹಾಗಾಗಿ ಕೇವಲ ಪೊಲೀಸರಿಂದ ಅಪರಾಧಗಳ ತಡೆ ಸಾಧ್ಯವಿಲ್ಲ. ಇದಕ್ಕೆ ಸಾರ್ವಜನಿಕರ ಸಹಕಾರವೂ ಮುಖ್ಯ.ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿಸೆಂಬರ್ ಮಾಹೆಯನ್ನು ಅಪರಾಧ ಮಾಸಾಚರಣೆಯನ್ನಾಗಿ ಆಚರಿಸಲಾಗುತ್ತದೆ ಎಂದರು.

ಪ್ರಸ್ತುತ ಸಮಾಜದಲ್ಲಿ ಒಂದಲ್ಲ ಒಂದು ರೀತಿಯ ಅಪರಾಧಗಳಾಗುತ್ತಿವೆ. ಕಾನೂನಿನ ಬಗ್ಗೆ ಅವರಿಗಿರುವ ತಾತ್ಸಾರ ಮನೋಭಾವನೆಯೇ ಇದಕ್ಕೆ ಕಾರಣ. ಇಂಥ ಪ್ರಕರಣಗಳ ಬಗ್ಗೆ ವಿದ್ಯಾರ್ಥಿ, ಸಾರ್ವಜನಿಕ ವಲಯದಲ್ಲಿ ಜಾಗೃತಿ ಮೂಡಿಸಿ ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಹಾಗೂ ಪೊಲೀಸ್ ಇಲಾಖೆ ಅಪರಾಧ ತಡೆಗಟ್ಟುವ ಮಾಸಾಚರಣೆ ಆಯೋಜಿಸಲಾಗಿದೆ.
ವಿದ್ಯಾರ್ಥಿ ಸಮೂಹದ ಮೇಲೆ ಅಪರಾಧ ತಡೆಗಟ್ಟುವ ಗುರುತರ ಜವಾಬ್ದಾರಿ ಇದ್ದು, ಮೊದಲು ವಿದ್ಯಾರ್ಥಿಗಳು ಜಾಗೃತಿಗೊಂಡು ಸಾರ್ವಜನಿಕರಿಗೆ ತಿಳಿ ಹೇಳಬೇಕು. ಇಂದು ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ಕಿರುಕುಳ ಮತ್ತಿತರ ದೌರ್ಜನ್ಯಗಳ ಬಗ್ಗೆ ಸದಾ ಜಾಗೃತಿವಹಿಸಬೇಕು. 18 ವರ್ಷದೊಳಗಿನ ಹೆಣ್ಣು ಮಕ್ಕಳು ಪ್ರೀತಿ, ಪ್ರೇಮಕ್ಕೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳದೇ ಉನ್ನತ ವ್ಯಾಸಂಗದ ಕಡೆ ಮುಖ ಮಾಡಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಮನೆಯಿಂದ ಅನ್ಯ ಕಾರ್ಯಗಳ ನಿಮಿತ್ತ ಬೇರೆ ಊರಿಗೆ ಹೋಗುವ ಸಮಯದಲ್ಲಿ ಮನೆಗೆ ಇಂಟರ್ಲಾಕ್ ಮಾಡಬೇಕು,ಮನೆಗಳಿಗೆ ಬೀಗ ಹಾಕಿ ಬೇರೆಡೆಗೆ ಹೋಗುವಾಗ ಪೊಲೀಸ್‌ ಠಾಣೆಗೆ ಲಿಖಿತ ಪತ್ರದೊಂದಿಗೆ ಮಾಹಿತಿ ನೀಡಬೇಕು. ಮನೆಯಲ್ಲಿ ನಗದು ಹಣ ಮತ್ತು ಒಡವೆಗಳನ್ನು ಸುರಕ್ಷಿತ ಜಾಗದಲ್ಲಿ ಇಟ್ಟು ತೆರಳಬೇಕು. ರಸ್ತೆ ಬದಿಯಲ್ಲಿ ಜಾನುವಾರುಗಳನ್ನು ಕಟ್ಟಿದ್ದಲ್ಲಿ ಕಳ್ಳರು ಕುರಿ,ಮೇಕೆ ದನ ಕರುಗಳನ್ನು ಕದಿಯಲು ಸುಲಭವಾಗುತ್ತದೆ, ಹಾಗಾಗಿ ರೈತರು ದನ ಕರುಗಳನ್ನು ಕಟ್ಟುವಾಗ ಜಾಗ್ರತೆ ವಹಿಸಬೇಕು ಮತ್ತು ಸಿಸಿಟಿವಿ ಅಳವಡಿಸಬೇಕು.ಯಾವುದೇ ಅಪರಾಧ ಪ್ರಕರಣಗಳು ಕಂಡು ಬಂದಲ್ಲಿ ಪೊಲೀಸರಿಗೆ ನೇರವಾಗಿ ಮಾಹಿತಿ ನೀಡಬೇಕು. ಮಕ್ಕಳು ತಮ್ಮ ತಂದೆ ತಾಯಿಂದಿರಿಗೆ ಅಪರಾಧಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದರು.

ಶ್ರೀ ತಿಪ್ಪೇರುದ್ರಸ್ವಾಮಿ ಗ್ರಾಮೀಣ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಂವೈಟಿ ಸ್ವಾಮಿ, ಮುಖ್ಯ ಶಿಕ್ಷಕ ಬಿ.ಆರ್ ರಮೇಶ್, ಸಹ ಶಿಕ್ಷಕ ಫಣಿಯಂದ್ರ ಕುಮಾರ್,ಡಿ. ಈರಣ್ಣ, ಬಸವರಾಜ್, ವೀರೇಶ್, ಕೆ ಮಾರುತಿ, ಬಿ ಉಮೇಶ್, ಕೆ. ರಾಜಣ್ಣ, ತಿಮ್ಮರಾಜ್ ಶಬ್ಬೀರ್ ಹಾಲೇಶ್.
ನಾಯಕನಹಟ್ಟಿ ಪೊಲೀಸ್ ಠಾಣೆಯ ಸಿಬ್ಬಂದಿ ಅಣ್ಣಪ್ಪನಾಯ್ಕ, ಕುಮಾರ್ ದೇವರಾಜ್ ಕೋಟೆ ,ವೀರೇಶ್, ಮಹೇಶ್, ಸೇರಿದಂತೆ ವಿದ್ಯಾರ್ಥಿ -ವಿದ್ಯಾರ್ಥಿಯರು ಇದ್ದರು

About The Author

Namma Challakere Local News
error: Content is protected !!