ನಗರಸಭೆಯ ಸದಸ್ಯರ ಕೊನೆಯ ಸಾಮಾನ್ಯ ಸಭೆ

ನಗರದ ರಸ್ತೆಗಳಿಗೆ ಮಹನೀಯರ ಹೆಸರುಗಳ ನಾಮಕರಣದ ಒಪ್ಪಿಗೆಗೆ ಸೀಮಿತವಾದ ಸಭೆ

ಚಳ್ಳಕೆರೆ: ನಗರದಲ್ಲಿನ ಮುಖ್ಯ ರಸ್ತೆಗಳು ಸೇರಿದಂತೆ ಕಾಲೋನಿಗಳ ರಸ್ತೆಗಳಿಗೆ ಮಾಜಿ ಪ್ರಧಾನಿ ದೇವೇಗೌಡ ಮಾಜಿ ಸಚಿವ ತಿಪ್ಪೇಸ್ವಾಮಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಸೇರಿದಂತೆ ಸುಮಾರು ಹತ್ತು ಮಹನೀಯರ ಹೆಸರುಗಳನ್ನು ನಾಮಕರಣ ಮಾಡಲು ಒಪ್ಪಿಗೆ ಪಡೆಯಲು ನಗರ ಸಭೆ ಸದಸ್ಯರ ಮನವಿಗೆ ನಗರಸಭೆಯ ಕೊನೆಯ ಸಾಮಾನ್ಯ ಸಭೆ ಸೀಮಿತವಾಗಿದ್ದು ನಗರದ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗುವಂತೆ ಮಾಡಿದೆ.

ನಗರದ ನಗರಸಭೆ ಆವರಣದಲ್ಲಿ ಅಧ್ಯಕ್ಷೆ ಶಿಲ್ಪ ರವರ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಸಭೆಯು ಸದಸ್ಯರ ಅಧಿಕಾರವಧಿಯ ಕೊನೆಯ ಸಭೆಯಾಗಿದ್ದು 49 ವಿಷಯಗಳು ಮಂಡನೆಯಾದವು ಅವುಗಳಲ್ಲಿ ಬಹುತೇಕ ಚರಂಡಿ ರಸ್ತೆ ಸೇರಿದಂತೆ ರಸ್ತೆಗಳಿಗೆ ಮಹನೀಯರ ಹೆಸರುಗಳನ್ನು ಇಡಲು ಚರ್ಚಿಸಲಾಯಿತು. 

ಮೂಲಭೂತ ಸೌಲಭ್ಯಗಳಿಗೆ ಒತ್ತು ನೀಡಿ: ನಗರಸಭೆ ಸದಸ್ಯ ಶ್ರೀನಿವಾಸ್ ಮಾತನಾಡಿ ಬರುವ ನ. 3ರಂದು ನಗರ ಸಭೆ ಸದಸ್ಯರ ಅಧಿಕಾರವಧಿ ಅಂತ್ಯಗೊಳ್ಳಲಿದ್ದು ಅಂದಿನಿಂದ ಅಧಿಕಾರಿಗಳೇ ತಮ್ಮ ಕಾರ್ಯಗಳನ್ನು ನಿರ್ವಹಿಸಬೇಕು ಆದ್ದರಿಂದ ನಗರದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಉತ್ತಮ ರೀತಿಯಲ್ಲಿ ಸ್ಪಂದಿಸಿ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಲ್ಲಾ ವಾರ್ಡ್ಗಳ ಚರಂಡಿ ಸ್ವಚ್ಛತೆ ವಿಲೇವಾರಿ ಸೇರಿದಂತೆ ಎಲ್ಲ ಕೆಲಸಗಳನ್ನು ನಗರಸಭೆಯ ಪೌರಾಯುಕ್ತರು ಮುತುವರ್ಜಿ ವಹಿಸಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದರು. 

ಮುಂದುವರೆದು ಮಾತನಾಡಿದ ಅವರು ನಗರದ ಪಾವಗಡ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಈಗಾಗಲೇ ಶವಗಳನ್ನು ಹೂಳಲು ಸ್ಥಳಾವಕಾಶ ಇಲ್ಲದೆ ಇರುವುದರಿಂದ ಬರ್ನಿಂಗ್ ಕ್ರಮವನ್ನು ಕೈಗೊಳ್ಳಬೇಕು ಅಲ್ಲಿ ಬೀದಿ ದೀಪ ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದರು. 

ನಗರದ ಸ್ವಚ್ಛತೆಗೆ ಆದ್ಯತೆ ನೀಡದ ಅಧಿಕಾರಿಗಳ ವಿರುದ್ಧ ಆಕ್ರೋಶ: ನಗರಸಭೆಯಲ್ಲಿ ಐದು ಜನ ಆರೋಗ್ಯ ನಿರೀಕ್ಷಕರು ಇದ್ದರೂ ಸಹ ನಗರದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ ಎಂದು ಎಲ್ಲ ನಗರಸಭೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ನಾಯಿಗಳ ಹಾವಳಿಗೆ ಸದಸ್ಯರ ಆಕ್ರೋಶ: ನಗರದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ನಾಯಿಗಳನ್ನು ಹಿಡಿದು ಬೇರೆಡೆ ಸಾಗಿಸುವಂತೆ ಹಿಂದಿನ ಸಭೆಗಳಲ್ಲಿ ಚರ್ಚಿಸಿದ್ದರು ಸಹ ನಗರಸಭೆ ಅಧಿಕಾರಿಗಳು ಜಾರಿಗೆ ತರುವಲ್ಲಿ ವಿಫಲರಾಗಿದ್ದಾರೆ ಎಂದು ಸದಸ್ಯ ವಿಷುಕುಮಾರ್ ಜಯಣ್ಣ ಜಯಲಕ್ಷ್ಮಿ ಪ್ರಮೋದ್ ನೇತಾಜಿ ಪ್ರಸನ್ನ ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಮಾತನಾಡಿದ ಪೌರಾಯುಕ್ತ ಜಗರೆಡ್ಡಿ ನಾಯಿಗಳನ್ನು ಹಿಡಿಯಲು ಟೆಂಡರ್ ಕರೆಯಲಾಗಿತ್ತು ಆದರೆ ಟೆಂಡರ್ ದಾರರ ನಿರಾಸಕ್ತಿಯಿಂದ ವಿಳಂಬವಾಗಿದೆ ಮುಂದಿನ ದಿನಗಳಲ್ಲಿ ಟೆಂಡರ್ ಕರೆದು ಸ್ಥಳೀಯವಾಗಿ ಇರುವವರನ್ನೇ ಆಯ್ಕೆ ಮಾಡಲಾಗುವುದು ಎಂದು ಸಮರ್ಥಿಸಿಕೊಂಡರು. 

ಸಭೆಯಲ್ಲಿ ಸದಸ್ಯ ಶ್ರೀನಿವಾಸ್ ಮಾತನಾಡಿ ಬೆಳಗಿನ ಸಮಯದಲ್ಲಿ ಮನೆಗಳಲ್ಲಿ ಕಸಗಳನ್ನು ಸಂಗ್ರಹಿಸುವ ವಾಹನಗಳ ಚಾಲಕರು ಕುಡಿದು ವಾಹನ ಚಲಾಯಿಸುತ್ತಾರೆ ಎಂಬ ಆರೋಪಗಳು ಕೇಳಿಬಂದಿದ್ದು ನಗರಸಭೆ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕು ಮುಂದಿನ ದಿನಗಳಲ್ಲಿ ಏನಾದರೂ ಅನಾಹುತಗಳು ಸಂಭವಿಸಿದರೆ ಅದಕ್ಕೆ ನಗರಸಭೆ ಅಧಿಕಾರಿಗಳೇ ಹೊಣೆಯಾಗಲಿದ್ದು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಚಾಲಕರಿಗೆ ಶಿಸ್ತು ಕ್ರಮದ ಎಚ್ಚರಿಕೆ ನೀಡಬೇಕು ಎಂದರು. 

ರಸ್ತೆಗೆ ಎಸೆಯುವ ಕಸಕ್ಕೆ ದಂಡ ವಿಧಿಸಿ: ನಗರದಲ್ಲಿ ವ್ಯಾಪಾರಸ್ಥರು ತಮ್ಮ ವ್ಯಾಪಾರ ವಹಿವಾಟು ಮುಗಿದ ನಂತರ ಕಸವನ್ನು ರಸ್ತೆಯಲ್ಲೇ ಬಿಟ್ಟು ಹೋಗುತ್ತಿದ್ದು ಇದರಿಂದ ನಗರದಲ್ಲಿ ಮಾಲಿನ್ಯ ಹೆಚ್ಚಾಗುತ್ತಿದೆ ಈ ಬಗ್ಗೆ ನಗರಸಭೆ ವತಿಯಿಂದ ಜಾಗೃತಿ ಮೂಡಿಸಿದರು ಪ್ರಯೋಜನವಾಗಿಲ್ಲ ಆದ್ದರಿಂದ ಸುಮಾರು 5 ಸಾವಿರದಷ್ಟು ದಂಡ ವಿಧಿಸಿದರೆ ವ್ಯಾಪಾರಸ್ಥರಿಗೆ ಅರಿವು ಮೂಡಿಸಿದಂತಾಗುತ್ತದೆ ಇದರ ಬಗ್ಗೆ ನಗರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. 

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಶಿಲ್ಪ ಉಪಾಧ್ಯಕ್ಷ ಕವಿತಾ ಸ್ಥಾಯಿ ಸಮಿತಿ ಅಧ್ಯಕ್ಷರು ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!