“ಶ್ರೀರಾಮಕೃಷ್ಣರು ಕಡೆದ ದಿವ್ಯಮಂಗಳಮೂರ್ತಿ ಸ್ವಾಮಿ ವಿವೇಕಾನಂದರು”:- ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ಅಭಿಪ್ರಾಯ. ಚಳ್ಳಕೆರೆ:- ಶ್ರೀರಾಮಕೃಷ್ಣರು ಕಡೆದ ದಿವ್ಯಮಂಗಳಮೂರ್ತಿ ಸ್ವಾಮಿ ವಿವೇಕಾನಂದರು ಎಂದು ಚಳ್ಳಕೆರೆಯ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ ಅಭಿಪ್ರಾಯಪಟ್ಟರು. ನಗರದ ತ್ಯಾಗರಾಜನಗರದ ಸದ್ಭಕ್ತರಾದ ಶ್ರೀಮತಿ ಬಿ.ಎಂ.ಗೀತಾ ಸುಂದರೇಶ್ ದೀಕ್ಷಿತ್ ಅವರ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಸ್ವಾಮಿ ವಿವೇಕಾನಂದ”ರ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಶ್ರೀರಾಮಕೃಷ್ಣ ಪರಮಹಂಸರು ಸ್ವಾಮಿ ವಿವೇಕಾನಂದರ ಆಧ್ಯಾತ್ಮಿಕ ಸಂಬಂಧ ಅನನ್ಯವಾದದ್ದು, ಶ್ರೀರಾಮಕೃಷ್ಣರು ಸ್ವಾಮೀಜಿಯವರ ಮೇಲೆ ಹರಿಸುತ್ತಿದ್ದ ಅಹೇತುಕ ಪ್ರೀತಿ ಅವಿಸ್ಮರಣೀಯವಾಗಿದ್ದು ಅವರ ಆಧ್ಯಾತ್ಮಿಕ ಗರಡಿಯಲ್ಲಿ ಪಳಗಿ ಅವರ ಕೃಪೆಯಿಂದ ವೇದಾಂತದ ಸಂದೇಶಗಳನ್ನು ಜಗತ್ತಿನಾದ್ಯಂತ ಪಸರಿಸಿದ ಅದ್ಭುತ ಸಂತ ಸ್ವಾಮಿ ವಿವೇಕಾನಂದರು ಎಂದು ಅವರು ತಿಳಿಸಿದರು. ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ಶ್ರೀಮತಿ ಮಂಗಳಗೌರಿ ನಾಗರಾಜ್ ಅವರಿಂದ ರಾಮನ ಭಜನೆ ಮತ್ತು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮವನ್ನು ಯತೀಶ್ ಎಂ ಸಿದ್ದಾಪುರ ನಡೆಸಿಕೊಟ್ಟರು. ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಮತಿ ಬಿ.ಎಂ.ಗೀತಾ ಸುಂದರೇಶ್ ದೀಕ್ಷಿತ್,ಭುವನ್, ಎಂ ಲಕ್ಷ್ಮೀದೇವಮ್ಮ ತಿಪ್ಪೇಸ್ವಾಮಿ,ಪಂಕಜ ಚೆನ್ನಪ್ಪ, ಸೌಮ್ಯ ಪ್ರಸಾದ್, ಸುವರ್ಣಮ್ಮ, ಸರಸ್ವತಿ ನಾಗರಾಜ್ ಭಾಗವಹಿಸಿದ್ದರು.

