ನಾಯಕನಹಟ್ಟಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮದರ್ ತೆರೇಸಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ಹಾಗೂ ಶಂಕರ್ ಕಣ್ಣಿನ ಆಸ್ಪತ್ರೆ ವತಿಯಿಂದ ಆಯೋಜಿಸಿದ್ದ ಉಚಿತ ತಪಾಸಣೆ ಶಿಬಿರ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪಿಎಸ್ ಐ ಪಾಂಡುರಂಗಪ್ಪ ಮಾತನಾಡಿ,ಕಣ್ಣಿನ ಆರೋಗ್ಯ ಕಾಪಾಡಲು ಮತ್ತು ದೃಷ್ಟಿ ಸಮಸ್ಯೆ ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿ, ಅಮೂಲ್ಯವಾದ ಕಣ್ಣುಗಳ ರಕ್ಷಣೆ ಬಗ್ಗೆಯೂ ಸದಾ ಎಚ್ಚರ ವಹಿಸುವುದು ಅತ್ಯಗತ್ಯ,ಉಚಿತ ನೇತ್ರ ತಪಾಸಣಾ ಶಿಬಿರಗಳಲ್ಲಿ ವೈದ್ಯರು ಉಚಿತವಾಗಿ ಕಣ್ಣಿನ ತಪಾಸಣೆ ನಡೆಸಿ, ಅಗತ್ಯವಿದ್ದಲ್ಲಿ ಚಿಕಿತ್ಸೆ ಅಥವಾ ಸಲಹೆ ನೀಡುತ್ತಾರೆ. ಇವುಗಳು ಕಣ್ಣಿನ ತೊಂದರೆಗಳನ್ನು ಸಕಾಲದಲ್ಲಿ ಗುರುತಿಸಲು ಮತ್ತು ಚಿಕಿತ್ಸೆ ನೀಡಲು ಸಹಾಯಕವಾಗಿವೆ ಇಂತಹ ಶಿಬಿರಗಳು ಬಡಜನರಿಗೆ ಉಪಯುಕ್ತವಾಗಿವೆ ಎಂದರು.
ಮದರ್ ತೆರೇಸಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಬಿ ಶಿವಮೂರ್ತಿ ಮಾತನಾಡಿ,ಕಣ್ಣು ಮಾನವನ ದೇಹದ ಅತೀ ಸೂಕ್ಷ್ಮವಾದ ಅಂಗ. ಇದನ್ನು ಅತೀ ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕು. ಈ ವಿಷಯದಲ್ಲಿಅಜಾಗರೂಕತೆ ತೋರುವುದು ಸೂಕ್ತವಲ್ಲ. ಕಣ್ಣಿನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರಿದ್ದೆ ಆದಲ್ಲಿ ಬದುಕೆಲ್ಲಾ ಅಂಧಾಕಾರದಲ್ಲಿ ಕಳೆಯುವ ಅಪಾಯವಿದ್ದು, ಈ ಬಗ್ಗೆ ನಾವೆಲ್ಲರು ಜಾಗರೂಕರಾಗಿರಬೇಕೆಂದು ಹೇಳಿದರು. ನಮ್ಮ ಭಾಗದಲ್ಲಿ ಬಡಜನರೆ ಹೆಚ್ಚಿರುವ ಕಾರಣ ದುಬಾರಿ ಹಣ ಖರ್ಚು ಮಾಡಿ ಬೇರೆ ಸ್ಥಳಗಳಿಗೆ ಹೋಗಿ ಕಣ್ಣು ತಪಾಸಣೆ ಮಾಡಿಸಿಕೊಳ್ಳಲು ಆಗುವುದಿಲ್ಲ ಹಾಗಾಗಿ ತಳಿಯವಾಗಿ ನಮ್ಮ ಸಂಘಟನೆಗಳಿಂದ ಬಡ ಜನರಿಗೆ ಉಪಯೋಗವಾಗಲಿ ಎನ್ನುವ ದೃಷ್ಟಿಯಿಂದ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆಯ ತಾಲೂಕು ಅಧ್ಯಕ್ಷ ಪಿ ಮುತ್ತಯ್ಯ ಜಾಗನೂರಹಟ್ಟಿ ಮಾತನಾಡಿ,ಮಾನವನ ದೇಹದಲ್ಲಿ ಹೃದಯ, ಮೂತ್ರಪಿಂಡಗಳಷ್ಟೇ ಸೂಕ್ಷ್ಮವಾದ ಮತ್ತೊಂದು ಅಂಗವೆಂದರೆ ಕಣ್ಣು. ಗಾಳಿಯಲ್ಲಿನ ಧೂಳು, ಸೂಕ್ಷ್ಮಾಣು ಜೀವಿಗಳು ಕಣ್ಣಿನೊಳಗೆ ಸೇರಿ ಸೋಂಕನ್ನು ಉಂಟು ಮಾಡುತ್ತವೆ. ಸೂಕ್ಷ್ಮ ಅಂಗವಾದ ಕಣ್ಣನ್ನು ಜೋಪಾನವಾಗಿ ಕಾಯ್ದುಕೊಳ್ಳಬೇಕು. ಕಣ್ಣಿನ ಆರೋಗ್ಯವನ್ನು ಸಾಧ್ಯವಾದಷ್ಟು ನೈಸರ್ಗಿಕವಾಗಿ ಸಿಗುವ ಪದಾರ್ಥಗಳಿಂದ ಕಾಯ್ದುಕೊಳ್ಳಬಹುದು. ಕಣ್ಣಿನ ಎಲ್ಲಾ ಸಮಸ್ಯೆಗೂ ಮನೆಮದ್ದು ಪರಿಹಾರವಲ್ಲ. ಯಾವುದೇ ಸಮಸ್ಯೆಗೆ ಮನೆಮದ್ದು ಪ್ರಯೋಗಿಸುವ ಮುನ್ನ ತಜ್ಞರ ಸಲಹೆ ಪಡೆಯಬೇಕು ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆಯ ಹೋಬಳಿ ಘಟಕ ಅಧ್ಯಕ್ಷ ಕೆ.ಜಿ. ಮಂಜುನಾಥ್ ಜೋಗಿಹಟ್ಟಿ ನಗರ ಘಟಕ ಅಧ್ಯಕ್ಷ ತಿಪ್ಪೇಸ್ವಾಮಿ. ಉಪಾಧ್ಯಕ್ಷ ಕೆ ಪಿ ನಾಗರಾಜ್ ಜಾಗನೂರಹಟ್ಟಿ, ಪೊಲೀಸ್ ಸಿಬ್ಬಂದಿಗಳಾದ ಭಾಷಾ ಅಣ್ಣಪ್ಪ ನಾಯ್ಕ ಲೋಹಿತ್ ಸೇರಿದಂತೆ ರೋಗಿಗಳು ಶಂಕರ್ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿಗಳು ಇದ್ದರು

