ಚಳ್ಳಕೆರೆ :
ಪರಿಸರ ಸಂರಕ್ಷಣೆಗಾಗಿ ಜಾಗೃತಿ ಮೂಡಿಸಲು ಪ್ರತಿವರ್ಷ ಭೂ ದಿನವನ್ನು ಆಚರಿಸಲಾಗುತ್ತದೆ, ಪರಿಸರ ಸಂರಕ್ಷಣೆ ಮತ್ತು ಸುಸ್ಥಿರತೆಯ ಪ್ರಾಮುಖ್ಯತೆಯ ಬಗ್ಗೆ ದಿನಾಚರಣೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಚಳ್ಳಕೆರೆಯ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಮೀರ್ ಪಿ. ನಂದ್ಯಾಲ ರವರು ಹೇಳಿದರು.
ಅವರು ನಗರದ ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ ,ನ್ಯಾಯಾಂಗ ಇಲಾಖೆ ಹಾಗೂ ಅರಣ್ಯ ಇಲಾಖೆ ಮತ್ತು ಚಳ್ಳಕೆರೆ ನಗರಸಭೆ ಇವರ ವತಿಯಿಂದ ನಗರದ ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿನೆಡುವುದರ ಮೂಲಕ ಪೊರಕೆ ಹಿಡಿದು ಕಸ ಗುಡಿಸಿ ನಂತರ ಅವರು ಮಾತನಾಡಿದರು.
ಭೂಮಿಯ ದಿನವು ಜಾಗೃತಿಯನ್ನು ಹೆಚ್ಚಿಸುತ್ತದೆ ಮತ್ತು ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಪ್ರೇರೇಪಿಸುತ್ತದೆ. ಪ್ರಕೃತಿಯೊಂದಿಗಿನ ನಮ್ಮ ಸಂಪರ್ಕ ಎಷ್ಟು ಆಳವಾಗಿದೆ ಮತ್ತು ಅದು ಇಲ್ಲದೆ ಮಾನವ ಜೀವನ ಸಾಧ್ಯವಿಲ್ಲ ಎಂದು ಈ ದಿನ ನಮಗೆ ನೆನಪಿಸುತ್ತದೆ ಇಂತಹ ಮಣ್ಣು ಪರಿಸರ ಸಂರಕ್ಷಿಸಲು ಎಲ್ಲರೂ ಮುಂದಾಗಬೇಕು ಎಂದರು.
ಗೌರವ್ವಾನಿತ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಹೇಮಾ ಎಚ್ ಆರ್. ಮಾತನಾಡಿ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಪ್ಲಾಸ್ಟಿಕ್ ಭೂಮಿಗೆ ಸೇರುತ್ತಿದ್ದು ಇದರಿಂದ ಮಣ್ಣಿನಲ್ಲಿ ಸಾರಾಂಶತೆ ಕಳೆದುಕೊಂಡು ಮಣ್ಣಿನಲ್ಲಿರುವಂತಹ ಸೂಕ್ಷ್ಮಾಣು ಜೀವಿಗಳು ನಾಶವಾಗುತ್ತವೆ. ಉತ್ತಮವಾದ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಪ್ಲಾಸ್ಟಿಕ್ ಮಣ್ಣು ಸೇರುತ್ತಿದ್ದು ಪ್ಲಾಸ್ಟಿಕ್ ತುಂಬಾ ಹಾನಿಕರವಾಗಿದೆ. ಪ್ರತಿಯೊಬ್ಬರೂ ಮಣ್ಣಿನ ಸಂರಕ್ಷಣೆ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದರು..
ಗೌರವಾನ್ವಿತ ಅಪರ ಸಿವಿಲ್ ನ್ಯಾಯಾಧೀಶರಾದ ಪುನೀತ್ ಬಿ ಆರ್ ಮಾತನಾಡಿ. ಪ್ರಕೃತಿಯಲ್ಲಿ ಹೆಚ್ಚು ಹೆಚ್ಚು ಗಿಡಮರಗಳನ್ನು ಬೆಳೆಸುವ ಮೂಲಕ ಮಣ್ಣಿನ ಸವಕಳಿ ಹಾಗೂ ಮಣ್ಣಿನ ರಕ್ಷಣೆ ಮಾಡಬಹುದು. ಪರಿಸರ ಸಂರಕ್ಷಣೆಯಲ್ಲಿ ಮಣ್ಣಿನ ಪಾತ್ರ ಮಹತ್ವವಾದದ್ದು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷರಾದ ಕೆ ಎಂ .ನಾಗರಾಜ್ ಮಾತನಾಡಿ ಮಣ್ಣು ಸವಕಳಿಯಾದರೆ ಗಿಡಮರಗಳನ್ನು ಬೆಳೆಸಿ ತಡೆಗಟ್ಟಬಹುದು ಆದರೆ ರಾಸಾಯನಿಕ ವಸ್ತುಗಳಿಂದ ಮಣ್ಣನ್ನು ಸಂರಕ್ಷಿಸಲು ಸಾಧ್ಯವಿಲ್ಲ. ಮಣ್ಣಿಗೆ ಅತಿ ಹೆಚ್ಚು ರಾಸಾಯನಿಕ ವಸ್ತು ಬಳಕೆ ಮಾಡುವುದರಿಂದ ಕೊಟ್ಯಂತರ ಸೂಕ್ಷ್ಮಜೀವಿಗಳು ನಾಶವಾಗುತ್ತವೆ. ಬೆಳೆ ಬೆಳೆಯಲು ಕೊಟ್ಟಿಗೆ ಗೊಬ್ಬರ ಹಾಗೂ ಹಸಿರಿನ ಎಲೆಗಳ ಗೊಬ್ಬರವನ್ನು ಬಳಕೆ ಮಾಡಿದರೆ ಉತ್ಕೃಷ್ಟವಾದ ಬೆಳೆಗಳನ್ನು ಬೆಳೆದುಕೊಳ್ಳಬಹುದು ಎಂದರು.
ಈ ಸಂದರ್ಭದಲ್ಲಿ ಚಳ್ಳಕೆರೆ ತಾಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಂ .ಸಿದ್ದರಾಜು, ಉಪಾಧ್ಯಕ್ಷರಾದ ಬಿ.ಪಾಲಯ್ಯ, ಖಜಾಂಚಿ ರುದ್ರಯ್ಯ. ನಗರ ಸಭೆ ಆರೋಗ್ಯ ನಿರೀಕ್ಷಕಿ ಗೀತಾ, ಹಾಗೂ ವಕೀಲರ ಸಂಘದ ಪದಾಧಿಕಾರಿಗಳಾದ ಪಾಪಣ್ಣ, ಅರಣ್ಯ ಇಲಾಖೆ ಸಿಬ್ಬಂದ್ದಿಗಳು,ನ್ಯಾಯಾಲಯದ ಸಿಬ್ಬಂದಿಗಳು ಇದ್ದರು….

