“ಸ್ವಾಮಿ ವಿವೇಕಾನಂದರ ಸಂದೇಶಗಳು ಸದಾ ಪ್ರಸ್ತುತ”:-ಯತೀಶ್ ಎಂ ಸಿದ್ದಾಪುರ ಅಭಿಮತ
ಚಳ್ಳಕೆರೆ:-ವಿಶ್ವವಿಖ್ಯಾತ ಸ್ವಾಮಿ ವಿವೇಕಾನಂದರು ತಮ್ಮ ಜೀವಿತಾವಧಿಯಲ್ಲಿ ಪ್ರತಿಪಾದಿಸಿದ ಸಂದೇಶಗಳು ನಮ್ಮ ಬದುಕಿಗೆ ಸದಾ ಪ್ರಸ್ತುತ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಯತೀಶ್ ಎಂ ಸಿದ್ದಾಪುರ ಅಭಿಪ್ರಾಯಪಟ್ಟರು. ವಾಲ್ಮೀಕಿ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಸ್ವಾಮಿ ವಿವೇಕಾನಂದರ 162ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸ್ವಾಮಿ ವಿವೇಕಾನಂದರಂತಹ ಮಹಾತ್ಮ ನಿರ್ಮಾಣವಾಗಲು ಅವರ ತಾಯಿ ಭುವನೇಶ್ವರಿದೇವಿಯ ಪ್ರಾರ್ಥನೆ,ಅವರು ತಾಯಿಯ ಮೇಲಿಟ್ಟಿದ್ದ ಮಾತೃಭಕ್ತಿ,ಅವರ ಗುರುಭಕ್ತಿಯು ಇಂದಿನ ನಮ್ಮಂತಹ ಯುವಕ-ಯುವತಿಯರಿಗೆ ಆದರ್ಶಪ್ರಾಯವಾಗಿದೆ. ಅವರ ಚಿಂತನೆಗಳಿಗೆ ಅದ್ಭುತವಾದ ಶಕ್ತಿಯಿದ್ದು ಅವುಗಳು ನಮ್ಮ ದೌರ್ಬಲ್ಯವನ್ನು ಕಿತ್ತೆಸೆಯುತ್ತವೆ.ಆದ್ದರಿಂದ ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಂದೇಶಗಳನ್ನು ನಿತ್ಯ ಅಧ್ಯಯನ ಮಾಡುವುದರಿಂದ ನಮ್ಮ ಜೀವನಕ್ಕೆ ಭರವಸೆ ಬರುತ್ತದೆ.ತನ್ಮೂಲಕ ಸಕಾರಾತ್ಮಕ ಜೀವನ ಶೈಲಿಯನ್ನು ಅನುಸರಿಸುವುದು ಸುಲಭಸಾಧ್ಯವಾಗುತ್ತದೆ. ಆದ್ದರಿಂದ ಅವರ ಜಯಂತೋತ್ಸವದ ಈ ಶುಭ ಸಂದರ್ಭದಲ್ಲಿ ಅವರ ಸಂದೇಶಗಳನ್ನು ಅನುಷ್ಠಾನ ಮಾಡುವ ಪಣ ತೊಡಬೇಕು ಎಂದು ತಿಳಿಸಿದರು.ಈ ಪ್ರವಚನ ಕಾರ್ಯಕ್ರಮಕ್ಕೆ ಮೊದಲು ಶ್ರೀಶಾರದಾಶ್ರಮದ ಸದ್ಭಕ್ತರಿಂದ “ಸ್ವಾಮಿ ವಿವೇಕಾನಂದರ” ಕುರಿತ “ವಿಶೇಷ ಭಜನಾ ಕಾರ್ಯಕ್ರಮ” ನಡೆಯಿತು.ಈ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ವಿಶಾಲಾಕ್ಷಿ ಪುಟ್ಟಣ್ಣ, ಗೀತಾ ನಾಗರಾಜ್,ಪ್ರಿಯಾಂಕ, ಪುಟ್ಟಣ್ಣ, ಟಿ.ಎಂ.ವಿಜಯಕಲಾ, ಶ್ರೀಜನಿ,ಸಿದ್ದಮ್ಮ, ಗಿರಿಜಾ ಜಗದೀಶ್, ಲಕ್ಷ್ಮೀದೇವಮ್ಮ, ಗಂಗಾಂಬಿಕೆ ಸೇರಿದಂತೆ ಶ್ರೀಶಾರದಾಶ್ರಮದ ಸದ್ಭಕ್ತರು ಭಾಗವಹಿಸಿದ್ದರು.

