ನಾಯಕನಹಟ್ಟಿ: ಗುರುತಿಪ್ಪೇರುದ್ರಸ್ವಾಮಿ ಚಿಕ್ಕಕೆರೆಯ ತೂಬಿನ ದುರವಸ್ಥೆಯಿಂದ ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹರಿದು ಹಳ್ಳ ಸೇರುತ್ತಿದೆ. ಇದು ಗ್ರಾಮಸ್ಥರಲ್ಲಿ ಬೇಸರ ಉಂಟು ಮಾಡಿದೆ.
ಪಟ್ಟಣಕ್ಕೆ ಹೊಂದಿಕೊಂಡಿರುವ ಗುರುತಿಪ್ಪೇರುದ್ರಸ್ವಾಮಿ ಚಿಕ್ಕಕೆರೆಯು 389 ಎಕರೆ ವಿಸ್ತೀರ್ಣ ಹೊಂದಿದೆ.ಇದು ಒಮ್ಮೆ ತುಂಬಿದರೆ ನಾಯಕನಹಟ್ಟಿ ಪಟ್ಟಣ ಸೇರಿ ಜಾಗನೂರಹಟ್ಟಿ, ಮಾದಯ್ಯನಹಟ್ಟಿ, ಮನುಮೈನಹಟ್ಟಿ, ಎನ್.ಮಹದೇವಪುರ, ಎನ್.ಗೌರಿಪುರ, ಓಬಯ್ಯನಹಟ್ಟಿ, ರೇಖಲಗೆರೆ, ಗುಂತಕೋಲಮ್ಮನಹಳ್ಳಿ ಸೇರಿ ಹತ್ತಾರು ಗ್ರಾಮಗಳಲ್ಲಿರುವ ಕೊಳವೆಬಾವಿಗಳ ಅಂತರ್ಜಲ ವೃದ್ಧಿಯಾಗುತ್ತದೆ.

ಈ ಕೆರೆ ನಾಯಕನಹಟ್ಟಿ ಪಟ್ಟಣದ 10 ವಾರ್ಡ್‌ಗಳಿಗೆ ಕುಡಿಯುವ ನೀರಿನ ಪ್ರಮುಖ ಜಲಮೂಲವಾಗಿದೆ. ಇಂತಹ ಮಹತ್ವ ಹೊಂದಿರುವ ಚಿಕ್ಕಕೆರೆಯು ನಿರಂತರ ಬರಗಾಲದಿಂದಾಗಿ 25 ವರ್ಷಗಳಿಂದ ಬತ್ತಿ ಬಿರುಕುಬಿಟ್ಟಿತ್ತು. ಇದರ ಪರಿಣಾಮ ಕೆರೆಯಲ್ಲಿ ಅಪಾರ ಪ್ರಮಾಣದ ಹೂಳು ತುಂಬಿತ್ತು. ಹಲವು ವರ್ಷಗಳಿಂದ ರೈತರು ತಮ್ಮ ಜಮೀನುಗಳಿಗೆ ಮತ್ತು ಕೆಲವರು ಇಟ್ಟಿಗೆ ತಯಾರಿಸಲು ಜೆಸಿಬಿ, ಟ್ರ್ಯಾಕ್ಟರ್ ಮತ್ತು ಟಿಪ್ಪರ್‌ಗಳ ಮೂಲಕ ಹೂಳನ್ನು ಖಾಲಿ ಮಾಡಿದ್ದರು.

ಈ ಕೆರೆ ಬತ್ತಿದ ಪರಿಣಾಮ ನಾಯಕನಹಟ್ಟಿ ಹೋಬಳಿಯ ಹತ್ತಾರು ಗ್ರಾಮಗಳಲ್ಲಿ ಅಂತರ್ಜಲಮಟ್ಟ ಕುಸಿದು ಕೊಳವೆಬಾವಿಗಳಲ್ಲಿ ನೀರಿಲ್ಲದ ಪರಿಸ್ಥಿತಿ ಉಂಟಾಗಿತ್ತು. ಪಟ್ಟಣ ಸೇರಿ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಹಲವು ವರ್ಷಗಳವರೆಗೆ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿತ್ತು.

ಎರಡು ತಿಂಗಳ ಹಿಂದೆ ಸುರಿದ ಭಾರಿ ಮಳೆಗೆ ಚಿಕ್ಕಕೆರೆಯು ತುಂಬಿ ಕೋಡಿಬಿದ್ದಿತು. ಕೆರೆ ಮೈದುಂಬಿರುವುದರಿಂದ ಅಂತರ್ಜಲ ವೃದ್ಧಿಯಾಗುತ್ತದೆ ಎಂಬ ಆಶಯ ರೈತರಲ್ಲಿದೆ. ಆದರೆ ತೂಬಿನಲ್ಲಿರುವ ತಾಂತ್ರಿಕ ದೋಷದಿಂದಾಗಿ ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹಳ್ಳ ಸೇರುತ್ತಿದೆ.

ತೂಬು ಬಂದ್ ಮಾಡಿದ್ದರೂ ನೀರು ಹೊರಗೆ ಹರಿದು ಹೋಗುತ್ತಿದೆ. ಇದೇ ರೀತಿ ಆದರೆ ಕೆರೆಯಲ್ಲಿ ನೀರು ಉಳಿಯುವುದೇ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಎರಡು ತಿಂಗಳಿಂದ ಇಲ್ಲಿಯವರೆಗೆ 2 ರಿಂದ 3 ಅಡಿಯಷ್ಟು ನೀರು ಖಾಲಿಯಾದರೂ ಸಣ್ಣ ನೀರಾವರಿ ಇಲಾಖೆ ಈವರೆಗೂ ತೂಬು ದುರಸ್ತಿ ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ.

ಇದೇ ರೀತಿ ನೀರು ಹರಿದರೆ ಬೇಸಿಗೆ ಆರಂಭವಾಗುವ ಮುನ್ನವೇ ಕೆರೆಯಲ್ಲಿರುವ ನೀರು ಖಾಲಿಯಾಗಬಹುದು ಎಂಬ ಭೀತಿ ಎದುರಾಗಿದೆ. ಮುಂದಿನ ದಿನಗಳಲ್ಲಿ ಬೇಸಿಗೆಯ ಬಿಸಿಲಿಗೆ ಕೆರೆಯಲ್ಲಿರುವ ನೀರು ಆವಿಯಾಗುತ್ತದೆ. ಅಂತರ್ಜಲ ಮಟ್ಟ ಕುಸಿಯುತ್ತದೆ. ಹಾಗಾಗಿ ತೂಬಿನ ಮೂಲಕ ಸೋರಿಕೆಯಾಗುತ್ತಿರುವ ಅಪಾರ ಪ್ರಮಾಣದ ನೀರನ್ನು ನಿಲ್ಲಿಸಲು ಸಣ್ಣ ನೀರಾವರಿ ಇಲಾಖೆ ಮುಂದಾಗಬೇಕು ಎಂದು ಹೋಬಳಿಯ ರೈತರಾದ ಕೊಂಡಯ್ಯನಕಪಿಲೆ ಬೋರಣ್ಣ, ಹಾಗೂ ಗುಂತಕೋಲಮ್ಮನಹಳ್ಳಿ ಬೂಟ್ ತಿಪ್ಪೇಸ್ವಾಮಿ, ಆಗ್ರಹಿಸಿದ್ದಾರೆ.

About The Author

Namma Challakere Local News
error: Content is protected !!