ಕನ್ನಡದ ಬಗ್ಗೆ ನೈಜ ಕಾಳಜಿ ಮತ್ತು ಅಭಿಮಾನ ಬಹುಮುಖ್ಯ – ಡಾ.ಎಸ್.ಏಚ್ ಶಫಿ ಉಲ್ಲಾ ಅಭಿಮತ
ಚಳ್ಳಕೆರೆ : ಹಣತೆ ಕವಿಬಳಗ ಹಾಗೂ ಸಾಂಸ್ಕೃತಿಕ ಕಲಾ ತಂಡ, ಚಿತ್ರದುರ್ಗ ಹಾಗೂ ಜಿಲ್ಲಾ ಕರುನಾಡ ಹಣತೆ ಕವಿ ಬಳಗ ದಾವಣಗೆರೆ ವತಿಯಿಂದ ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಬೆಣ್ಣೆನಗರಿ ಸಾಹಿತ್ಯ ಸಂಭ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಸಾಹಿತಿ ಗಂಗಾಧರ ವರ್ಮ ಉದ್ಘಾಟಿಸಿ ಮಾತಾನಾಡಿ,
ಹಲವು ಕನ್ನಡ ಸಾಹಿತ್ಯ ಸಂಘಟನೆಗಳು ರಾಜ್ಯಾದ್ಯಂತ ಕನ್ನಡ ನಾಡು-ನುಡಿಯ ಬೆಳವಣಿಗೆಗೆ ಸಾಕಷ್ಟು ಉಪಯುಕ್ತ ಕಾರ್ಯಕ್ರಮ ಆಯೋಜಿಸಿ ಕನ್ನಡಿಗರಲ್ಲಿ ಕನ್ನಡ ತನವನ್ನು ಎಚ್ಚರಿಸುತ್ತವೆ.
ಇದಕ್ಕೆ ಕರುನಾಡು ಕವಿ ಹಣತೆ ಬಳಗದ ಕಾರ್ಯಕ್ರಮ ನಿದರ್ಶನವಾಗಿದೆ.
ಆದರೆ ಕನ್ನಡ ಸಾಹಿತ್ಯ ಪರಿಷತ್ತಿನಂತಹ ಸರ್ಕಾರಿ ಸಂಸ್ಥೆಗಳು ಏನು ಮಾಡುತ್ತಿವೆ ಎಂಬ ಪ್ರಶ್ನೆ ಕಾಡುತ್ತದೆ ಎಂದರು.
ಡಾ.ಎಸ್ ಎಚ್ ಶಫಿಉಲ್ಲ ಕಾರ್ಯಕ್ರಮದ ಅಶಯ ನುಡಿಯಲ್ಲಿ ಮಾತನಾಡುತ್ತಾ ಕನ್ನಡಕ್ಕೆ ಎರಡು ಸಾವಿರದ ಐದನೂರು ವರ್ಷಗಳ ಇತಿಹಾಸವಿದೆ. ಜಗತ್ತಿನ ಬೇರೆ ಯಾವ ಭಾಷೆಗಳು ಒಳಗೊಳ್ಳದ ಸಾಹಿತ್ಯ ಶ್ರೀಮಂತಿಕೆ ಕನ್ನಡಕ್ಕಿದೆ. ಹಿಂದಿ ಇಂಗ್ಲೀಷ್ ತೀರಾ ಇತ್ತೀಚಿನ ಭಾಷೆಗಳಾಗಿದ್ದು ಕನ್ನಡವನ್ನು ಶೋಷಿಸುತ್ತಿವೆ.ಎಲ್ಲಾ ಕನ್ನಡಿಗರಿಗೂ ಮೊದಲಿನಿಂದಲೂ ಕನ್ನಡದ ಬಗ್ಗೆ ನೈಜ ಕಾಳಜಿ ಅಭಿಮಾನವಿದ್ದಿದ್ದರೆ ಕನ್ನಡ ಜಾಗತಿಕ ಮಟ್ಟದಲ್ಲಿ ಅತ್ಯಂತ ಎತ್ತರದ ಸ್ಥಾನಮಾನ ಪಡೆಯುತಿತ್ತು.
ಈಗ ಸರ್ಕಾರ ಮೊದಲು ಕನ್ನಡಿಗನ್ನು ಬದುಕಿಸಬೇಕು. ನಂತರ ಇವರು ಕನ್ನಡವನ್ನು ಬದುಕಿಸುತ್ತಾರೆ. ಕನ್ನಡ ಅನ್ನಭಾಷೆಯಾಗಬೇಕು. ಬದುಕಿಗೆ ಭದ್ರತೆ ನೀಡುವ ಭಾಷೆಯಾಗಬೇಕು. ದಕ್ಷಿಣ ಭಾರತದಲ್ಲಿ ಹಿಂದಿ ಹೇರುವ ಮೂಲಕ ಕನ್ನಡದಂತಹ ಪ್ರಾದೇಶಿಕ ಭಾಷೆಗಳನ್ನು ವ್ಯವಸ್ಥಿತವಾಗಿ ತುಳಿಯುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಶ್ರೀದೇವಿ ಸೂರ್ಯ ಸುವರ್ಣಖಂಡಿ ಸರ್ವಾಧ್ಯಕ್ಷತೆ ವಹಿಸಿಕೊಂಡಿದ್ದರು.ಮುಖ್ಯ ಅತಿಥಿಗಳಾದ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಾಮದೇವಪ್ಪ, ಹಿರಿಯ ಸಾಹಿತಿ ಎರ್ರಿಸ್ವಾಮಿ,ಶಾಂತ ಬಸವರಾಜ್, ಎಚ್ ಎಸ್ ಗೌಡರ್ ,ಸುಜಾತ, ಸಂಸ್ಥಾಪಕರಾದ ಕನಕಪ್ರೀತೀಶ್, ರಾಜ್ಯ ಮಹಿಳಾಘಟಕದ ಅಧ್ಯಕ್ಷೆ ರೇಖಾ ಶಿವರಾಮ್ ಭಟ್ ಇದ್ದರು. ಕರುನಾಡ ಕವಿ ಹಣತೆ ಬಳಗ ದಾವಣಗೆರೆ ಜಿಲ್ಲಾಧ್ಯಕ್ಷ ಶಾಂತಕುಮಾರ್ ಪ್ರಾಸ್ತಾವಿಕವಾಗಿ ನುಡಿದರು.
ನೇತ್ರಾವತಿ ನೆಲ್ಲಿಕಟ್ಟೆ ಸ್ವಾಗತಿಸಿದರು, ಉದಯ್ ಬಡಿಗೇರ್ ನಿರೂಪಿಸಿದರು.
ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.