ಚಳ್ಳಕೆರೆ ನ್ಯೂಸ್ : ಬಯಲು ಸೀಮೆಯ ಗೋವುಗಳಿಗೆ ಮೇವು ನೀಡುವ ಗೋರಕ್ಷಕರಂತೆ ಬುಡಕಟ್ಟು ಹಟ್ಟಿಗಳಿಗೆ ಪ್ರತಿ ಹದಿನೈದು ದಿನಕ್ಕೊಂಮ್ಮೆ ಮೇವು ನೀಡುವ ಕಾರ್ಯ ನಿರಂತರವಾಗಿದೆ ಅದರಂತೆ ಪಾವಗಡದ ಶ್ರೀರಾಮಕೃಷ್ಣ ಆಶ್ರಮದ ಸ್ವಾಮೀಜಿಗಳಾದ ಜಪಾನಂದ ಸ್ವಾಮೀಜಿ ರವರು ಉಚಿತ ಮೇವು ವಿತರಣಾ ಯೋಜನೆಯಲ್ಲಿ ಚಳ್ಳಕೆರೆ ಹಾಗೂ ಇತರ ತಾಲ್ಲೂಕುಗಳಲ್ಲಿ ಮೇವು ವಿತರಣ ಯೋಜನೆಯ ಪರಿಶೀಲನೆಯನ್ನು ಸ್ವಾಮಿ ಜಪಾನಂದಜೀ ರವರು ಕೈಗೊಂಡಿದ್ದರು.

ಅದರಂತೆ ಚಳ್ಳಕೆರೆ ತಾಲ್ಲೂಕಿನ ಚಿಕ್ಕಮ್ಮನಹಳ್ಳಿ, ಬಂಗಾರ ಚೆನ್ನಯ್ಯನಹಟ್ಟಿ, ಮಂದ ಬೊಮ್ಮಲಿಂಗೇಶ್ವರ ದೇವರ ಎತ್ತುಗಳಿಗೆ ಮೇವನ್ನು ಒದಗಿಸಿ ಅಲ್ಲಿಯೇ ಇರುವ ಪರಿಸ್ಥಿತಿಯನ್ನು ಆಮೂಲಾಘ್ರವಾಗಿ ಪರಿಶೀಲಿಸಿದರು.

ಸ್ವಾಮೀಜಿಯವರಿಗೆ ಯಜಮಾನರಾದ ಚಿತ್ತಪ್ಪ ಹಾಗೂ ಕಿಲಾರಿಯಾದ ಕಾಟಪ್ಪ ಬರಮಾಡಿಕೊಂಡು ಹಟ್ಟಿಯ ವಿಚಾರಗಳನ್ನು ತಿಳಿಸಿದರು. ಕಳೆದ ಮೂರು ದಿನಗಳ ಹಿಂದೆಯಷ್ಟೇ ಮೇವು ಸಂಪೂರ್ಣವಾಗಿ ಮುಗಿದಿದ್ದು, ದಿಕ್ಕು ತೋಚದಂತೆ ಇದ್ದ ಪರಿಸ್ಥಿತಿಯಲ್ಲಿ ಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್ ರವರು ತತ್‍ಕ್ಷಣಕ್ಕೆ ಒಂದು ಲೋಡು ಭತ್ತದ ಹುಲ್ಲನ್ನು ವಿತರಿಸಿದ್ದು ಅತ್ಯಂತ ಸಮಯೋಚಿತ ಹಾಗೂ ತತ್‍ಕ್ಷಣದ ವ್ಯವಸ್ಥೆಯನ್ನು ಮಾಡಿದಂತಾಯಿತು ಎಂದು ಕಿಲಾರಿಗಳು ತಿಳಿಸಿದರು.

ಇದೇ ಸಂದರ್ಭದಲ್ಲಿ ಭಯಂಕರ ಬಿಸಿಲಿನ ಬೇಗೆಯಿಂದ ದೇವರ ಹಸುಗಳನ್ನು ದೂರದೂರ ಕರೆದೊಯ್ದು ಬರಿಗೈಯಲ್ಲಿ ಮೇವಿಲ್ಲದೆ ಬಂದ ದೃಶ್ಯವಂತೂ ಹೃದಯಸ್ಪರ್ಶಿಯಾಗಿತ್ತು.

ಪೂಜ್ಯ ಸ್ವಾಮಿ ಜಪಾನಂದಜೀ ರವರು ಮುಂಗಾರು ಮಳೆ ಬರುವವರೆಗೆ ಮೇವನ್ನು ನೀಡುವುದಾಗಿ ಭರವಸೆಯಿತ್ತರು.
ತದನಂತರ ಮೊಳಕಾಲ್ಮೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ ದೇವರ ಎತ್ತುಗಳು ಅಂದರೆ 75 ಎತ್ತುಗಳು ರಾಯಪುರ, ಮ್ಯಾಸದೇವರಹಟ್ಟಿ, ಪದಿನಾನ ದೇವರ ಎತ್ತುಗಳ ಹಟ್ಟಿಗೆ ಭೇಟಿಯಿತ್ತು ಅಲ್ಲಿಯ ವಿಚಾರಗಳನ್ನು ಪರಾಮರ್ಶಿಸಿದರು.

ಇಲ್ಲಿಯೂ ಸಹ ಬಡಕಲಾದ, ನಿತ್ರಾಣವಾದ ದೇವರ ಎತ್ತುಗಳನ್ನೇ ಕಾಣಬಹುದಾಗಿತ್ತು. ಒಂದು ಲೋಡು ಮೇವನ್ನು ಇಲ್ಲಿ ತಲುಪಿಸಿದಾಗ ಆ ಕಿಲಾರಿಗಳ ಮುಖದಲ್ಲಿ ಸಂತೋಷದ ಛಾಯೆಯನ್ನು ಕಾಣಬಹುದಾಗಿತ್ತು.

ಕಳೆದ ಒಂದು ವರ್ಷದಿಂದ ದೇವರ ಎತ್ತುಗಳು / ಹಸುಗಳನ್ನು ಕಾಪಾಡಿಕೊಂಡು ಬರಲು ಅಹರ್ನಿಷಿ ಶ್ರಮಿಸುತ್ತಿರುವ ಶ್ರೀರಾಮಕೃಷ್ಣ ಸೇವಾಶ್ರಮಕ್ಕೆ ಸಂಪೂರ್ಣ ಸಹಕಾರ ನೀಡುತ್ತಿರುವ  ಸುಧಾಮೂರ್ತಿ ಹಾಗೂ  ನಾರಾಯಣ ಮೂರ್ತಿ, ಮೆ||ಮೂರ್ತಿ ಟ್ರಸ್ಟ್ ರವರ ಅಮೂಲ್ಯ ಸಹಾಯವನ್ನು ಇಲ್ಲಿ ನೆನಪಿಸಿಕೊಳ್ಳಬೇಕಾಗಿದೆ.

ಇದೇ ಸಂದರ್ಭದಲ್ಲಿ ಮಹೇಶ್ ಸಿ.ಪಿ. ರವರು ಈ ಯೋಜನೆಯ ಸಂಯೋಜಕರಾಗಿ ವರ್ಷವಿಡೀ ಆಶ್ರಮದ ಕಾರ್ಯಗಳಿಗೆ ಪೂರ್ಣ ಸಹಕಾರ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾದುದು. ಇವರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತಿರುವ ಸಿದ್ದೇಶ್ ಮತ್ತು ಸುಮಾರು 43 ಹಟ್ಟಿಗಳ ಯಜಮಾನರುಗಳು, ಕಿಲಾರಿಗಳು ನಮ್ಮ ಸಂಸ್ಥೆಯ ಜೊತೆಯಲ್ಲಿದ್ದು ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗೆಯೇ ಓಬಣ್ಣ, ಹಿರಿಯ ಪ್ರಾಧ್ಯಾಪಕರು ಮತ್ತು ಸಂಶೋಧಕರು, ಮಂಜಣ್ಣ ಮುಂತಾದವರು ಪೂರ್ಣ ಸಹಕಾರ ನೀಡಿ ಈ ಯೋಜನೆ ಯಶಸ್ವಿಯಾಗುವಂತೆ ಮಾಡಿರುತ್ತಾರೆ. ಮುಂಗಾರು ಮಳೆ ಪೂರ್ಣ ಪ್ರಮಾಣದಲ್ಲಿ ಬರುವವರೆವಿಗೂ ಸ್ಥಳೀಯ ಕಿಲಾರಿಗಳ, ಯಜಮಾನರುಗಳ, ಪೂಜಾರಿಗಳ ಮನವಿಯಂತೆ ಪೂಜ್ಯ ಸ್ವಾಮಿ ಜಪಾನಂದಜೀ ರವರು ಉಚಿತ ಮೇವು ವಿತರಣಾ ಯೋಜನೆಯನ್ನು ನಡೆಸಿಕೊಂಡು ಹೋಗುತ್ತೇವೆ ಎಂದು ಭರವಸೆ ನೀಡಿರುತ್ತಾರೆ.

About The Author

Namma Challakere Local News
error: Content is protected !!