ಚಳ್ಳಕೆರೆ: ಸಮಸಮಾಜದ ಕನಸು ಕಂಡಿದ್ದ ಬಸವಣ್ಣನವರು ತಮ್ಮ ವಚನ ಸಾಹಿತ್ಯದ ಮೂಲಕ ಸಮಾಜವನ್ನು ತಿದ್ದುವ ದೊಡ್ಡ ಪ್ರಯತ್ನ ಮಾಡಿದರು. ಆ ಮೂಲಕ ದಾರ್ಶನಿಕರ ಚಿಂತನೆಗಳನ್ನು ಪಾಲಿಸುವುದರೊಂದಿಗೆ ಜೀವನದಲ್ಲಿ ನೆಮ್ಮದಿ ಕಾಣಬಹುದು ಎಂದು ಹೆಚ್ ಪಿಪಿಸಿ ಸರ್ಕಾರಿ ಪ್ರಥಮ‌ ದರ್ಜೆ ಕಾಲೇಜಿನ ಪ್ರಚಾರ್ಯ ಡಾ.ಆರ್.ರಂಗಪ್ಪ ಹೇಳಿದರು.
ನಗರದ ಹೆಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಅವರು ಮಾತನಾಡಿದರು.
ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕ ರಾಜ್ಯದಲ್ಲಿ ನಡೆದ ಸಾಮಾಜಿಕ ಕ್ರಾಂತಿಯ ರೂವಾರಿ ಬಸವಣ್ಣನವರು. ಅಲ್ಲಮಪ್ರಭು, ಅಕ್ಕಮಹಾದೇವಿ, ಮಡಿವಾಳಮಾಚಯ್ಯ, ನೂಲಿನ ಚಂದಯ್ಯ ಮುಂತಾದ ಶಿವಶರಣರ ಕಾಲದಲ್ಲಿಯೇ ಜೀವಿಸಿದ್ದ ಜಗಜ್ಯೋತಿ ಬಸವಣ್ಣನವರ ಪ್ರಭಾವದ ಕಾರಣ ಆ ಕಾಲವನ್ನು ಬಸವಯುಗವೆಂದೇ ಕರೆಯುತ್ತಾರೆ.
ಮನುಕುಲೋದ್ಧಾರಕ, ಮೊಟ್ಟಮೊದಲ ವರ್ಗ-ವರ್ಣ ರಹಿತ ಸಮಾಜದ ಕನಸು ಕಂಡಿದ್ದ ಬಸವಣ್ಣ, ಆರ್ಥಿಕ ಪ್ರಗತಿಯ ಪ್ರತಿಪಾದಕನೂ ಆಗಿದ್ದರು. ಒಬ್ಬ ಅರ್ಥ ಮಂತ್ರಿಯಾಗಿ ಭಂಡಾರದ ಸಂಪತ್ತಿನ ವಿತರಣೆಯಲ್ಲಿ ಅವರು ಉಂಟುಮಾಡಿದ ಬದಲಾವಣೆ, ರಾಷ್ಟ್ರದ ಸುಖ ಜೀವನಕ್ಕೆ ಕಾರಣವಾದ ಸಂಪತ್ತಿನ ಉತ್ಪಾದನೆಯ ವಿಚಾರದಲ್ಲಿ ಅವರು ಉಂಟುಮಾಡಿದ ಸಮಾನತೆಯ ಜಾಗೃತಿ, ಅದು ಸಮಾಜವನ್ನು ಪೂರ್ಣವಾಗಿಸಿದುದಲ್ಲದೇ, ದುಡಿಮೆಯ ಗೌರವವನ್ನು ಹೆಚ್ಚಿಸಿತ್ತು.
ಸಮಾಜದ ಆರ್ಥಿಕ ಸ್ಥಿತಿಗತಿಯನ್ನು ಗಮನಿಸಿದ ಬಸವಣ್ಣನವರು ವಾಸ್ತವ ಮತ್ತು ತಾತ್ವಿಕ ನೆಲೆಗಳೆರಡರ ಮೂಲಕ ಸಮಾಜದಲ್ಲಿ ಆರ್ಥಿಕ ಸಮಾನತೆಯನ್ನು ತರಲು ಪ್ರಯತ್ನಿಸಿದರು. ಜನರಲ್ಲಿ ವೈಚಾರಿತೆಯನ್ನು ಮಾಡಿಸಲು ಮುಂದಾದರು. ಆ ಜಾಡಿನಲ್ಲಿ ತಮ್ಮ ವೈಚಾರಿಕತೆಯ ಆಲೋಚನೆಗಳನ್ನು ವಿಸ್ತೃತಗೊಳಿಸಿಕೊಂಡು ಮಂಡಿಸಿದರು.ಅರ್ಥಚಿಂತನೆಗೆ ಉದಾತ್ತತೆಯನ್ನು ತಂದುಕೊಟ್ಟರು. ಆ ಮೂಲಕ ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಸಮ ಸಮಾಜದ ನಿರ್ಮಾಣದ‌ ಕನಸ್ಸನ್ನು ಕಂಡಿದ್ದರು. ಅಬರ ತತ್ವಾದರ್ಶಗಳು ಎಂದಿಗೂ ಅನುಕರಣೀಯವಾದುದು ಎಂದರು.

ಇದೇವೇಳೆ ಕಾಲೇಜಿನ ಸಿಬ್ಬಂದಿ ಮಂಜುನಾಥ್, ಸರಸ್ವತಿ, ಅನಿತ, ವರಲಕ್ಷ್ಮಿ, ಹನುಂತಪ್ಪ ಇದ್ದರು.

About The Author

Namma Challakere Local News
error: Content is protected !!