ಚಿತ್ರದುರ್ಗ,ಜ.13 -ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ವಿಫಲರಾದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಪ್ರವಾಸೋದ್ಯಮ ಇಲಾಖೆ ನಿರ್ದೇಶಕರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಜಿಲ್ಲಾ ಪಂಚಾಯತ್ ಡಿಸೆಂಬರ್-2022ರ ಮಾಹೆಯ ಅಂತ್ಯದವರೆಗಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಮಾಸಿಕ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,
ಕ್ರಿಯಾ ಯೋಜನೆಯಂತೆ ಕಾಮಗಾರಿಗಳು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳ್ಳಬೇಕು. ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ದೂರು ಬಂದರೆ ತಕ್ಷಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ತನಿಖೆಗೆ ಸೂಚನೆ :
ಜಿಲ್ಲಾ ಪಂಚಾಯತ್‍ನಿಂದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕಾಮಗಾರಿಗಳನ್ನು ಕೈಗೊಳ್ಳಲು ಪಂಚಾಯತ್‍ರಾಜ್ ಇಂಜಿನಿಯರಿಂಗ್ ವಿಭಾಗಕ್ಕೆ ಕಾಮಗಾರಿ ಅನುಷ್ಠಾನದ ಹೊಣೆ ನೀಡುವ ಬದಲು, ನಿಯಮ ಬಾಹಿರವಾಗಿ ನಿರ್ಮಿತಿ ಕೇಂದ್ರದವರಿಗೆ ವಹಿಸಿ, ಅನುದಾನ ನೀಡಲಾಗಿದೆ.ಈ ಕುರಿತು ಕೈಗೊಂಡಿರುವ ಕಾಮಗಾರಿಗಳ ವಿವರಗಳು, ಕಾಮಗಾರಿಗಳ ಸ್ಥಿತಿ-ಗತಿ ಹಾಗೂ ಬಿಡುಗಡೆ ಮಾಡಲಾಗಿರುವ ಅನುದಾನದ ವಿವರ ಕುರಿತಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಲೆಕ್ಕಪರಿಶೋಧನಾ ಅಧಿಕಾರಿ, ಪಿಆರ್‍ಇಡಿ ಇಇ ಸೇರಿದಂತೆ ವಿವಿಧ ಅಧಿಕಾರಿಗಳನ್ನು ಒಳಗೊಂಡ ಸಮಿತಿಯು ತನಿಖೆ ನಡೆಸಿ 15 ದಿನಗಳ ಒಳಗಾಗಿ ವರದಿ ಸಲ್ಲಿಸಬೇಕು.ಇದುವರೆಗೂ ಪ್ರಾರಂಭವಾಗಿಲ್ಲದ ಕಾಮಗಾರಿಗಳನ್ನು ಹಿಂಪಡೆದು, ಪಿಆರ್‍ಇಡಿ ಅವರಿಗೆ ಅನುಷ್ಠಾನದ ಜವಾಬ್ದಾರಿ ನೀಡುವಂತೆ ಸೂಚನೆ ನೀಡಿದರು.

ನರೇಗಾದಡಿ ರಸ್ತೆ ಕಾಮಗಾರಿ ಕೈಗೊಳ್ಳಿ :
ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ಕನ್ವರ್ಜೆನ್ಸ್‍ನಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 30 ಕಿ.ಮೀ. ರಸ್ತೆ ಕಾಮಗಾರಿ ಕೈಗೊಳ್ಳಲು ತಲಾ 03 ಕೋಟಿ ರೂ. ಅನುದಾನ ಒದಗಿಸಲಾಗಿದ್ದು, ಈಗಾಗಲೆ ಆರ್ಥಿಕ ವರ್ಷ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದರೂ, ಪಿಆರ್‍ಇಡಿ ವಿಭಾಗದವರು ಕ್ರಿಯಾ ಯೋಜನೆ ರೂಪಿಸಿ, ಕಾಮಗಾರಿ ಪ್ರಾರಂಭಿಸಿಲ್ಲ, ಗ್ರಾಮೀಣ ಪ್ರದೇಶಗಳ ರಸ್ತೆಗಳಲ್ಲಿ ಕೆಲವೆಡೆ ಗುಂಡಿ ಬಿದ್ದಿವೆ, ಇದನ್ನು ಕರ್ತವ್ಯಲೋಪವೆಂದು ಗಂಭೀರವಾಗಿ ಪರಿಗಣಿಸಲಾಗುವುದು, ಬರುವ ತಿಂಗಳು ಮತ್ತೊಮ್ಮೆ ಪ್ರಗತಿ ಪರಿಶೀಲನೆ ನಡೆಸಲಾಗುವುದು, ಅಷ್ಟರೊಳಗೆ ಎಲ್ಲ ಕಾಮಗಾರಿಗಳು ಪ್ರಾರಂಭಗೊಂಡಿರಬೇಕು ಎಂದು ಪಿಆರ್‍ಇಡಿ ಕಾರ್ಯಪಾಲಕ ಅಭಿಯಂತರರಿಗೆ ತಾಕೀತು ಮಾಡಿದರು. ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ವಿಫಲರಾಗಿದ್ದಕ್ಕೆ ಕಾರಣಕರ್ತರಾದ ಎಲ್ಲ ಅಧಿಕಾರಿಗಳಿಗೂ ನೋಟಿಸ್ ನೀಡುವಂತೆ ಡಾ. ರಾಮ್‍ಪ್ರಸಾತ್ ಮನೋಹರ್ ಅವರು ಸೂಚನೆ ನೀಡಿದರು.

ಗಂಗಾಕಲ್ಯಾಣ ಯೋಜನೆ ಪರಿಶೀಲಿಸಿ :
ಜಿಲ್ಲೆಯಲ್ಲಿ ವಿವಿಧ ನಿಗಮಗಳಡಿ ಬಡ ರೈತರಿಗೆ ಗಂಗಾ ಕಲ್ಯಾಣ ಯೋಜನೆಗಳಡಿ ಬೋರ್‍ವೆಲ್ ಕೊರೆಯಿಸಿ, ಮೋಟಾರ್ ಅಳವಡಿಕೆ ಮಾಡಲಾಗಿದೆ.ನಿಗಮದ ಅಧಿಕಾರಿಗಳು ಫಲಾನುಭವಿಗಳ ಪಟ್ಟಿಯಲ್ಲಿನ ಕನಿಷ್ಟ 10 ರಿಂದ 15 ಫಲಾನುಭವಿಗಳ ಹೊಲಕ್ಕೆ ಭೇಟಿ ನೀಡಿ, ಬೋರ್‍ವೆಲ್‍ಗೆ ಮೋಟಾರು ಅಳವಡಿಕೆ, ವಿದ್ಯುದೀಕರಣ ಆಗಿದಿಯೇ ಎಂಬುದನ್ನು ಹಾಗೂ ಈ ಯೋಜನೆಯಡಿ ಹೊಲಕ್ಕೆ ನೀರು ಹರಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು,ಬಳಿಕ ಸೂಕ್ತ ಫೋಟೋಗಳೊಂದಿಗೆ ಪರಿಶೀಲನಾ ವರದಿಯನ್ನು ಸಲ್ಲಿಸುವಂತೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ್, ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಮುಖ್ಯ ಯೋಜನಾಧಿಕಾರಿ ಗಾಯತ್ರಿದೇವಿ ಸೇರಿದಂತೆ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

About The Author

Namma Challakere Local News
error: Content is protected !!