ವಿದ್ಯಾರ್ಥಿಗಳು ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಪಣತೊಡಬೇಕು: ತಹಶಿಲ್ದಾರ್ ರೆಹಾನ್ ಪಾಷಾ
ಚಳ್ಳಕೆರೆ:ವಿದ್ಯಾರ್ಥಿ ಜೀವನದಲ್ಲಿ ಯುವ ಜನತೆ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ವಿದ್ಯಾಭ್ಯಾಸ ಪಡೆದು ತಮ್ಮ ಜವಾಬ್ದಾರಿಗಳನ್ನು ಅರಿತು ಜೀವನವನ್ನು ಕಟ್ಟಿಕೊಳ್ಳುವ ಮೂಲಕ ಸಮಾಜಕ್ಕೆ ಉತ್ತಮ ಪ್ರಜೆಯಾಗಿ ರೂಪುಗೊಳ್ಳಬೇಕಿದೆ ಎಂದು ತಹಶೀಲ್ದಾರ್ ರೆಹಾನ್ ಪಾಷಾ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಶಿವಯೋಗಿ ಸ್ವಾಮೀಜಿಯವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಪುಸ್ತಕಗಳ ಕಡೆ ಗಮನಹರಿಸದೆ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಮೊರೆ ಹೋಗುತ್ತಿರುವುದು ವಿಷಾದದ ಸಂಗತಿಯಾಗಿದೆ ಅಲ್ಲದೆ ಜಾಹೀರಾತುಗಳಲ್ಲಿ ತೋರಿಸುವ ದುಷ್ಟ ವ್ಯಸನಗಳಿಗೆ ಬಲಿಯಾಗಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುವುದಲ್ಲದೆ ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ಕೀಳಾಗಿ ಕಾಣುವ ಪರಿಸ್ಥಿತಿ ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಶ್ರೀ ಶಿವಯೋಗಿ ಸ್ವಾಮೀಜಿಯವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ನಿವೃತ್ತ ಪ್ರಾಧ್ಯಾಪಕ ನಾಗರಾಜ್ ಮಾತನಾಡಿ ಶಿವಯೋಗಿ ಸ್ವಾಮೀಜಿಯವರು ದುಷ್ಚಟಗಳನ್ನು ತನ್ನ ಜೋಳಿಗೆಗೆ ಹಾಕಿ ಎಂಬ ನುಡಿಯನ್ನು ಇಡೀ ಸಮಾಜಕ್ಕೆ ಸಾರಿದ್ದಾರೆ ವಿದ್ಯಾರ್ಥಿಗಳು ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಮಾದಕ ವಸ್ತುಗಳ ಮೊರೆ ಹೋಗುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಒತ್ತಡ ರಹಿತ ಜೀವನ ನಡೆಸಲು ಉತ್ತಮ ಪುಸ್ತಕಗಳನ್ನು ಓದುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸುವ ಕಲೆ ರೂಢಿಸಿಕೊಳ್ಳಬೇಕಿದೆ ಮುಂದಿನ ದಿನಗಳಲ್ಲಾದರೂ ಸಮಾಜವು ವ್ಯಸನ ವ್ಯಕ್ತವಾಗಿ ರೂಪುಗೊಂಡು ಶಿವಯೋಗಿ ಸ್ವಾಮೀಜಿಯವರ ಕಲ್ಪನೆ ಸಾಕಾರಗೊಳ್ಳಲಿ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು .