ನಾಯಕನಹಟ್ಟಿ ಪಟ್ಟಣದ ಮೈರಾಡ ಕಚೇರಿಯ ತಿಪ್ಪೇರುದ್ರಸ್ವಾಮಿ ರೈತ ಉತ್ಪಾದಕ ಕಂಪನಿ ಸಭಾಂಗಣದಲ್ಲಿ ಸೋಮವಾರ ಪಪ್ಪಾಯ ಬೆಳೆಯ ಸುಧಾರಣಾ ಕ್ರಮಗಳ ಬಗ್ಗೆ ಹಿರಿಯೂರಿನ ತೋಟಗಾರಿಕೆ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಮಂಜಪ್ಪ ಮಾಹಿತಿ ನೀಡಿದರು.
ನಾಯಕನಹಟ್ಟಿ : ಚಿತ್ರದುರ್ಗ ಜಿಲ್ಲೆಯ ಒಣ ವಲಯದ ಹವಾಗುಣವು ಪಪ್ಪಾಯ ಬೆಳೆಗೆ ಸೂಕ್ತವಾಗಿದ್ದು, ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುವ ರೈತರು ಪಪ್ಪಾಯ ಬೆಳೆಯನ್ನು ಬೆಳೆಯಲು ಮುಂದಾಗಬೇಕು ಎಂದು ಹಿರಿಯೂರಿನ ತೋಟಗಾರಿಕೆ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಶ್ರೀಧರ್ ಹೇಳಿದರು.
ಮೈರಾಡ ಕಚೇರಿಯ ತಿಪ್ಪೇರುದ್ರಸ್ವಾಮಿ ರೈತ ಉತ್ಪಾದಕ ಕಂಪನಿ ಸಭಾಂಗಣದಲ್ಲಿ ಸೋಮವಾರ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ಶಿವಮೊಗ್ಗ, ತೋಟಗಾರಿಕೆ ಮಹಾವಿದ್ಯಾಲಯ ಹಿರಿಯೂರು, ತಿಪ್ಪೇರುದ್ರಸ್ವಾಮಿ ರೈತಉತ್ಪಾದಕ ಕಂಪನಿ ಸಹಯೋಗದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚಿತ್ರದುರ್ಗ ಜಿಲ್ಲೆಯು ರಾಜ್ಯದಲ್ಲಿ ಮಧ್ಯ ಒಣವಲಯದಲ್ಲಿ ಕಂಡು ಬರಲಿದ್ದು, ಮಳೆಯ ಕೊರತೆ ಯತೇಚ್ಛವಾಗಿರುತ್ತದೆ. ಇದರಿಂದ ಅಂತರ್ಜಲದ ಮಟ್ಟ ಕುಸಿದು ಕೊಳವೆಬಾವಿಗಳಲ್ಲಿ ಸಿಗುವ ಅತ್ಯಲ್ಪ ನೀರಿನಲ್ಲಿ ಜಿಲ್ಲೆಯ ನೂರಾರು ರೈತರು ತೋಟಗಾರಿಕೆ ಬೆಳೆಗಳನ್ನು ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದರಂತೆ ಮಧ್ಯಮಾವಧಿ ಬೆಳೆಯಾದ ಪಪ್ಪಾಯ ಬೆಳೆಯು ಜಿಲ್ಲೆಯ ಹಲವು ಭಾಗಗಳಲ್ಲಿ ಉತ್ತಮವಾದ ರುಚಿ, ಇಳುವರಿ ಮತಯ್ತು ರೈತರಿಗೆ ಆದಾಯವನ್ನು ತಂದುಕೊಡುವ ಬೆಳೆಯಾಗಿದೆ. ಈ ಬೆಳೆಯಲ್ಲಿ ಹಲವು ತಳಿಗಳಿದ್ದು, ನಮ್ಮ ಜಮೀನುಗಳ ಭೂಮಿಯ ಫಲವತ್ತತೆ ಮಾರುಕಟ್ಟೆಯ ಜ್ಞಾನವನ್ನು ಅರಿತು ಪಪ್ಪಾಯ ಬೆಳೆಯನ್ನು ಬೆಳೆಯಲು ರೈತರು ಮುಂದಾಗಬೇಕು. ಮಣ್ಣಿನ ಆರೋಗ್ಯವನ್ನು ವೃದ್ಧಿಸಲು ಮಣ್ಣಿನ ಪರೀಕ್ಷೆ ಮಾಡಿಸಿಕೊಂಡು ಅಗತ್ಯವಾದ ಪೋಷಕಾಂಶಗಳನ್ನು ಭೂಮಿಗೆ ನೀಡಬೇಕು. ನಂತರ ಸ್ಥಳಿಯವಾಗಿ ಸಿಗುವ ಸಂಪನ್ಮೂಲಗಳನ್ನು ಬಳಸಿಕೊಂಡು ಜೀವಾಮೃತ ಮತ್ತು ಸಾವಯವ ಗೊಬ್ಬರಗಳನ್ನು ಬಳಸಬೇಕು. ವಿಜ್ಞಾನಿಗಳ ಮತ್ತು ಕೃಷಿ ಅಧಿಕಾರಿಗಳ ಮಾರ್ಗದರ್ಶನದಂತೆ ಅತ್ಯಲ್ಪ ರಾಸಾಯನಿಕಗಳನ್ನು ಬಳಸಿ ಉತ್ತಮವಾದ ಇಳುವರಿಯನ್ನು ಪಡೆಯಬಹುದು. ಹಾಗೇ ರಾಜ್ಯ ಅಂತರ ರಾಜ್ಯಗಳಲ್ಲಿ ಪಪ್ಪಾಯ ಹಣ್ಣಿಗೆ ಬೇಡಿಕೆಯಿದ್ದು, ಉತ್ತಮವಾದ ಬೆಲೆ ಸಿಗುತ್ತದೆ. ಪಪ್ಪಾಯ ಬೆಳೆಯನ್ನು ಸಮಗ್ರ ಕೃಷಿ ಪದ್ಧತಿಯಲ್ಲೂ ಬೆಳೆಯಬಹುದು. ಇದರಿಂದ ಹಲವು ಬೆಳೆಗಳಿಂದ ರೈತರ ಆದಾಯದಲ್ಲಿ ನಷ್ಟ ಕಡಿಮೆಯಾಗಿ ಆದಾಯ ದ್ವಿಗುಣವಾಗುತ್ತದೆ. ಈ ಬಗ್ಗೆ ಸೂಕ್ತ ಮಾರ್ಗದರ್ಶನ ಮತ್ತು ಉಚಿತ ಪ್ರಾತ್ಯಕ್ಷಿಕಗಳನ್ನು ನಮ್ಮ ಮಹಾವಿದ್ಯಾಲಯದಲ್ಲಿ ನೀಡಲಾಗುವುದು. ಆಸಕ್ತ ರೈತರು ಸಂಪರ್ಕಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ತೋಟಗಾರಿಕೆ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಮಂಜಪ್ಪ, ಪ್ರಾಧ್ಯಾಪಕ ಅಮರೇಶ್‌ಕುಮಾರ್ ಮಾತನಾಡಿದರು.
ಇದೇವೇಳೆ ತಿಪ್ಪೇರುದ್ರಸ್ವಾಮಿ ರೈತ ಉತ್ಪಾದಕ ಕಂಪನಿ ನಿರ್ದೇಶಕರಾದ ಬಿ.ಟಿ.ಪ್ರಕಾಶ್, ಬೋರಯ್ಯ, ಹೆಚ್.ಬಿ.ತಿಪ್ಪೇಸ್ವಾಮಿ, ರೈತರಾದ ನಾಗರಾಜ, ಬೋರಯ್ಯ, ಸಾಕಪ್ಪ, ರಂಗಪ್ಪ ಅವರೂ ಇದ್ದರು.