ಚಿತ್ರದುರ್ಗ, ನ.1 : ಸಾವಿರಾರು ವರ್ಷಗಳ ಸುದೀರ್ಘ ಇತಿಹಾಸ, ಪರಂಪರೆಯನ್ನು ಹೊಂದಿರುವ ಕನ್ನಡ ಭಾಷೆಯು ತುಂಬಾ ಸಂಪದ್ಭರಿತವಾದುದು ಎಂದು ಪ್ರಾಚಾರ್ಯರಾದ ಡಾ. ಎಸ್.ಹೆಚ್. ಪಂಚಾಕ್ಷರಿ ಹೇಳಿದರು.
ನಗರದ ಚಂದ್ರವಳ್ಳಿಯ ಎಸ್.ಜೆ.ಎಂ. ಕಾಲೇಜಿನ ಕನ್ನಡ ವಿಭಾಗವು 68ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಟನಮನ ಸಲ್ಲಿಸಿ ಅವರು ಮಾತನಾಡುತ್ತಿದ್ದರು. ನಮ್ಮ ಹಿರಿಯ ತಲೆಮಾರಿನ ರಾ.ಹ. ದೇಶಪಾಂಡೆ, ಆಲೂರು ವೆಂಕಟರಾಯರು, ಹುಯಿಲಗೋಳ ನಾರಾಯಣರಾವ್, ಶಾಂತರಸ ಮುಂತಾದವರ ಸುದೀರ್ಘ ಹೋರಾಟದ ಫಲವಾಗಿ ವಿಶಾಲ ಮೈಸೂರು ರಾಜ್ಯ ಉದಯವಾಯಿತು. ಆ ಮೂಲಕ ಕನ್ನಡ ಭಾಷೆಯನ್ನಾಡುವ ಕನ್ನಡಿಗರು, ಪ್ರದೇಶಗಳು ಒಟ್ಟಾಗಿ ಏಕೀಕೃತ ಕರ್ನಾಟಕ ರಾಜ್ಯವಾಯಿತು. ಕನ್ನಡಕ್ಕೆ ತನ್ನದೇ ಆದ ಭವ್ಯ ಪರಂಪರೆ ಇದೆ. ಕವಿರಾಜ ಮಾರ್ಗದಿಂದ ಮೊದಲ್ಗೊಂಡು ಪಂಪ, ರನ್ನ, ಪೊನ್ನ, ಬಸವಾದಿ ಶರಣರು, ಕುಮಾರವ್ಯಾಸ, ದಾಸಶ್ರೇಷ್ಠರಾದ ಕನಕ-ಪುರಂದರರು, ಸಂತಶ್ರೇಷ್ಠರಾದ ಶಿಶುನಾಳ ಷರೀಫರು, ಹೊಸಗನ್ನಡ ಕಾಲದ ಹಿರಿಯರಾದ ಬಿ.ಎಂ.ಶ್ರೀ., ಕುವೆಂಪು, ಕಾರಂತರು, ಬೇಂದ್ರೆ, ಅಡಿಗರು, ಅನಂತಮೂರ್ತಿ, ಕಂಬಾರರು, ದೇವನೂರು, ಸಿದ್ಧಲಿಂಗಯ್ಯ ಇನ್ನು ಮುಂತಾದವರಿAದ ಕನ್ನಡ ಸಾಹಿತ್ಯವು ಬೆಳೆದುಬಂದಿದೆ. ಕನ್ನಡ ಭಾಷೆ ದೇಶದಲ್ಲೆ ಅತಿಹೆಚ್ಚು 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವುದು ನಮಗೆ ಹೆಮ್ಮೆಯ ವಿಚಾರವಾಗಿದೆ. ಇಂತಹ ಭವ್ಯ ಪರಂಪರೆಯುಳ್ಳ ಕನ್ನಡ ಭಾಷೆ ಮತ್ತು ಸಾಹಿತ್ಯ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಕನ್ನಡಿಗರಾದ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಜಿ.ಎನ್. ಬಸವರಾಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕ ರಾಜ್ಯೋತ್ಸವದ ಸುವರ್ಣ ಸಂಭ್ರಮ ವರ್ಷಾಚರಣೆಯ ಈ ಸಂದರ್ಭದಲ್ಲಿ ನಾಡು-ನುಡಿ ಕುರಿತ ಸವಾಲುಗಳು ನಮ್ಮ ಮುಂದಿದ್ದು, ಜಾಗತೀಕರಣ, ಜಾಗತಿಕ ಆರ್ಥಿಕ ನೀತಿಗಳ ಕಾರಣದಿಂದಾಗಿ ಪ್ರಾದೇಶಿಕ ಭಾಷೆಗಳ ಅಸ್ಮಿತೆಗೆ ಧಕ್ಕೆಯಾಗುತ್ತಿದ್ದು ಆತಂಕದ ದಿನಗಳನ್ನು ಎದುರಿಸುತ್ತಿವೆ. ಇಂತಹ ಸಂದಿಗ್ಧದಿAದ ನಮ್ಮ ಭಾಷೆ, ಪರಂಪರೆಯನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಕನ್ನಡ ಎಂಬುದು ಬರೀ ಒಂದು ಭಾಷೆಯಲ್ಲ. ಅದು ಕನ್ನಡಿಗರ ಉಸಿರು, ವಿವೇಕ, ಸಂಸ್ಕತಿ ಮತ್ತು ಜೀವನ ವಿಧಾನವಾಗಿದೆ. ಕರುಳ ಭಾಷೆಯಾಗಿ, ಜ್ಞಾನದ ಭಾಷೆಯಾಗಿ ಬೆಳೆದಿರುವ ಕನ್ನಡವು ಉದ್ಯೋಗದ ಭಾಷೆಯಾಗುವ ತುರ್ತು ಇದ್ದು, ಎಲ್ಲರೂ ಸೇರಿ ಕನ್ನಡವನ್ನು ಕಟ್ಟುವ ಕೆಲಸ ಮಾಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕನ್ನಡ ಗೀತೆಗಳನ್ನು ಹಾಡಿದರು. ಪ್ರಾಧ್ಯಾಪಕರುಗಳಾದ ಪ್ರೊ. ಎಲ್.ಶ್ರೀನಿವಾಸ್, ಪ್ರೊ. ಆರ್.ಕೆ. ಕೇದಾರನಾಥ್, ಐಕ್ಯುಎಸಿ ಸಂಯೋಜಕರಾದ ಡಾ. ಹರ್ಷವರ್ಧನ್, ಪ್ರೊ. ಹೆಚ್.ಎಂ. ಮಂಜುನಾಥಸ್ವಾಮಿ, ಪ್ರೊ. ಬಿ.ಎಂ. ಸ್ವಾಮಿ, ಪ್ರೊ. ಬಿ.ನಾಗರಾಜ್, ಪ್ರೊ. ವೆಂಕಟೇಶ್, ಪ್ರೊ. ಟಿ.ಎನ್.ರಜಪೂತ್, ಪ್ರೊ. ವಿ.ಎಸ್.ನಳಿನಿ, ಪ್ರೊ. ಎನ್.ಚಂದಮ್ಮ, ಡಾ. ನಾಜೀರುನ್ನಿಸಾ, ಬೋಧಕೇತರ ವರ್ಗದವರು ಹಾಗು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕನ್ನಡ ವಿಭಾಗದ ಡಾ. ಬಿ. ರೇವಣ್ಣ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.