ದಿನನಿತ್ಯ ಪುಸ್ತಕ, ಪೆನ್ನು ಹಿಡಿದು ಪಾಠ ಕಲಿಯುತ್ತಿದ್ದ ವಿದ್ಯಾರ್ಥಿಗಳು ಇಂದು ತಕ್ಕಡಿ, ತರಕಾರಿ ಬುಟ್ಟಿ ಹಿಡಿದು ‘ವ್ಯಾಪಾರಿ’ಗಳಾಗಿ ಬದಲಾಗಿದ್ದರು!
ಹೌದು, ಚಳ್ಳಕೆರೆ ನಗರದ ಎಸ್ ಆರ್ ಎಸ್ ಹೆರಿಟೇಜ್ ಶಾಲೆಯು ಆಯೋಜಿಸಿದ್ದ ‘ಮಾರುಕಟ್ಟೆ ದಿನ’ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯವಿದು.
ಮಕ್ಕಳ ಕಲರವ, ಗ್ರಾಹಕರನ್ನು ಕರೆಯುವ ಕೂಗು, ಚೌಕಾಶಿ ಮಾಡುವ ದೃಶ್ಯಗಳು ಮೇಳೈಸಿದ್ದವು.
ಹಾಗೂ ವಿದ್ಯಾರ್ಥಿಗಳು ಸಂತೆಯಲ್ಲಿ ಇಟ್ಟುಕೊಂಡ ವಿವಿಧ ಬಗೆಯ ತರಕಾರಿಗಳನ್ನು ಜನರಿಗೆ ಮಾರಿದರು.
ಈ ಮಾರುಕಟ್ಟೆಗೆ ಭೇಟಿ ನೀಡಿದ ಪೋಷಕರು, “ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಲು ಇಂತಹ ಕಾರ್ಯಕ್ರಮಗಳು ಬಹಳ ಅಗತ್ಯ. ಮಕ್ಕಳು ತುಂಬಾ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಕೇವಲ ಮೋಜಿಗಷ್ಟೇ ಸೀಮಿತವಾಗಿರಲಿಲ್ಲ. “ಮಕ್ಕಳಿಗೆ ಹಣದ ಮೌಲ್ಯ (Financial Literacy), ಲಾಭ-ನಷ್ಟದ ಲೆಕ್ಕಾಚಾರ, ಆಯವ್ಯಯ ಪಟ್ಟಿ ಸಿದ್ಧಪಡಿಸಲು (Balance sheet) ಮತ್ತು ಗ್ರಾಹಕರೊಂದಿಗೆ ಮಾತನಾಡುವ ಕಲೆ (Communication Skills) ಪ್ರಾಯೋಗಿಕವಾಗಿ ತಿಳಿಯಲಿ ಎಂಬ ಉದ್ದೇಶದಿಂದ ಈ ಸಂತೆ ಆಯೋಜಿಸಲಾಗಿದೆ,” ಎಂದು ಶಾಲೆಯ ಪ್ರಾಚಾರ್ಯರಾದ ಬಿ. ಎಸ್. ವಿಜಯ್ ರವರು ತಿಳಿಸಿದರು. ಈ ಮಕ್ಕಳ ಸಂತೆಯನ್ನು ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ. ಎಸ್. ಸುರೇಶ್ ರವರು ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಸೃಜನಶೀಲತೆಯನ್ನು ಹೆಚ್ಚಿಸುವುದರೊಂದಿಗೆ ಮಕ್ಕಳಿಗೆ ಪ್ರಾಯೋಗಿಕ ಜ್ಞಾನ ಹಾಗೂ ಗಣಿತದ ಬಗ್ಗೆ ಸದಭಿರುಚಿಯನ್ನು ಬೆಳೆಸಲು ಸಹಕಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮತ್ತೋರ್ವ ಅತಿಥಿಗಳು ಉದ್ಘಾಟಕರಾದ ಶ್ರೀಯುತ ಕೊರ್ಲ ಕುಂಟೆ ತಿಪ್ಪೇಸ್ವಾಮಿ ಅವರು ಎಸ್. ಆರ್. ಎಸ್. ಶಿಕ್ಷಣ ಸಂಸ್ಥೆಯ ಇಂತಹ ಸದಾಭಿರುಚಿ ಕಾರ್ಯಕ್ರಮಗಳು ವಿದ್ಯಾರ್ಥಿಗಳನ್ನು ಭವಿಷ್ಯದ ಸಮಾಜಕ್ಕೆ ಅಣಿಗೊಣಿಸುವಲ್ಲಿ ಹೆಚ್ಚು ಸಹಕಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ. ಗಣಿತ ಶಿಕ್ಷಕರಾದ ಗೌತಮ್ ಹಾಗೂ ಇತರೆ ಶಿಕ್ಷಕರಾದ ಶಿಲ್ಪಾ, ಅರುಣ್, ಕುಮಾರ್, ಮೊಮಮ್ಮದ್ ನ್ಯಾಯಾಜ್ ರವರು ಉಪಸ್ಥಿತರಿದ್ದರು. ಈ ಒಂದು ಕಾರ್ಯಕ್ರಮಕ್ಕೆ ಸಂಸ್ಥೆಯ ಅಧ್ಯಕ್ಷರಾದ ಬಿ. ಎ. ಲಿಂಗಾರೆಡ್ಡಿ, ಕಾರ್ಯದರ್ಶಿ ಸುಜಾತಾ ಲಿಂಗಾರೆಡ್ಡಿ ಉಪಾಧ್ಯಕ್ಷ ಬಿ.ಎಲ್. ಅಮೋಘ್ ರವರು ಶುಭ ಕೋರಿದರು.


