ಶ್ರೀ ತಿಪ್ಪೇರುದ್ರಸ್ವಾಮಿಗಳ ಏಕಾಂತೇಶ್ವರ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ನಾಯಕನಹಟ್ಟಿ: ಹೋಬಳಿಯ ಎನ್ ಮಹದೇವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನಮೈನಹಟ್ಟಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ 3 ಗಂಟೆಗೆ ಗ್ರಾಮದ ಆರಾಧ್ಯ ದೈವ ಶ್ರೀ ತಿಪ್ಪೇರುದ್ರಸ್ವಾಮಿ ಏಕಾಂತೇಶ್ವರ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಮಹಾಮಂಗಳಾರತಿ,ವೀರಗಾಸೆ, ನಂದಿಕೋಲು, ತಮಟೆ ವಾದ್ಯಗಳೊಂದಿಗೆ ಮನಮೈನಹಟ್ಟಿ ಗ್ರಾಮದ ಆರಾಧ್ಯ ದೈವ ಶ್ರೀ ತಿಪ್ಪೇರುದ್ರಸ್ವಾಮಿ ಏಕಾಂತೇಶ್ವರ ರಥೋತ್ಸದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.ಇನ್ನೂ ರಥೋತ್ಸವಕ್ಕೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಿಂದ ಬಲಿ ಅನ್ನ ತರಲಾಯಿತು . ಕಾಸು ಮೀಸಲು ಮೊಸರು ಕುಂಭ ಜಿನಿಗೆ ಹಾಲು ತಂದು ಶ್ರೀ ತಿಪ್ಪೇರುದ್ರಸ್ವಾಮಿ ಏಕಾಂತೇಶ್ವರ ರಥಕ್ಕೆ ಎಡೆ ಹಾಕಲಾಯಿತು.
ಶ್ರೀ ತಿಪ್ಪೇರುದ್ರಸ್ವಾಮಿ ಏಕಾಂತೇಶ್ವರ ರಥೋತ್ಸವ ದೇವಸ್ಥಾನದಿಂದ ಗ್ರಾಮದ ಪ್ರಮುಖ ಬೀದಿಯಲ್ಲಿ ಸಾಗಿ ಪಾದಗಟ್ಟಿಯವರಿಗೆ ಮೆರವಣಿಗೆ ನಡೆಯಿತು.
ರಥೋತ್ಸವಕ್ಕೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಚ್. ಗಂಗಾಧರಪ್ಪ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಪ್ರತಿವರ್ಷದಂತೆ ಈ ಬಾರಿಯೂ ಕಾರ್ತಿಕ ಮಾಸದಲ್ಲಿ ಶ್ರೀ ತಿಪ್ಪೇರುದ್ರಸ್ವಾಮಿ ಏಕಾಂತೇಶ್ವರ ರಥೋತ್ಸವವನ್ನು ನಡೆಸುವುದು ವಾಡಿಕೆ, ಅದರಂತೆ ಈ ದಿನ ನಾವುಗಳು ಈ ರಥೋತ್ಸವಕ್ಕೆ ಚಾಲನೆ ನೀಡಲಾಗಿದೆ. ಶ್ರೀ ಗುರು ತಿಪ್ಪೇರುದ್ರ ಸ್ವಾಮಿಗಳು 45 ದಿನಗಳ ಕಾಲ ಏಕಾಂತವಾಗಿ ತಪಸ್ಸು ಮಾಡಿದ ಸ್ಥಳವಾಗಿದೆ. ಈ ಸ್ಥಳವನ್ನು ಏಕಾಂತೇಶ್ವರ ಮಠ ಎಂದು ಕರೆಯಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಏಕಾಂತೇಶ್ವರ ಸ್ವಾಮಿಗಳ ಹೊಸ ರಥವನ್ನು ಸಿದ್ಧಪಡಿಸಲಾಗಿತ್ತು. ಈ ರಥದಲ್ಲಿ ಸ್ವಾಮಿಗಳ ಉತ್ಸವವನ್ನು ಏರ್ಪಡಿಸಲಾಗಿದೆ. ಸಕಲ ಭಕ್ತಾದಿಗಳು ಆಗಮಿಸಿ ಸ್ವಾಮಿಯ ಉತ್ಸವದಲ್ಲಿ ಪಾಲ್ಗೊಂಡಿದ್ದಕ್ಕೆ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸಿದರು. ಶ್ರೀ ಗುರು ತಿಪ್ಪೇರುದ್ರಸ್ವಾಮಿಗಳ ಒಳಮಟ್ಟ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಹಾಗೂ ಶುಕ್ರವಾರದಂದು ಸ್ವಾಮಿಗಳ ದೊಡ್ಡ ಕಾರ್ತಿಕೋತ್ಸವ ಇರುವುದರಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಪಿಎಸ್ಐ . ಜಿ.ಪಾಂಡುರಂಗಪ್ಪ, ಬೆಸ್ಕಾಂ ಶಾಖಾಧಿಕಾರಿ ಎನ್.ಬಿ. ಬೋರಣ್ಣ, ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಸಿಬ್ಬಂದಿ ಎಸ್. ಸತೀಶ್, ಮನಮೈನಹಟ್ಟಿ ಗ್ರಾಮದ ಮುಖಂಡರಾದ ಜಿ.ಬಿ. ಬಸವರಾಜ್, ಗ್ರಾಮ ಪಂಚಾಯತಿ ಸದಸ್ಯರಾದ ಎಚ್. ಶಿವಣ್ಣ, ನಿರಂಜನ್, ಗೌಡಗೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಜಿ.ಒ.ಓಬಳೇಶ್, ಬಿಎಸ್ಎಫ್ ಸಾಮ್ಯ ನಾಯ್ಕ, ಸೇರಿದಂತೆ ಸಮಸ್ತ ಊರಿನ ಗ್ರಾಮಸ್ಥರು ಭಕ್ತಾದಿಗಳು ಇದ್ದರು.

