ಸತ್ಯ ಮತ್ತು ಶಾಂತಿ ಮಾರ್ಗದಲ್ಲಿ ನೆಡೆದ ಮಹಾನ್ ಚೇತನ ಮಹಾವೀರ
ಚಳ್ಳಕೆರೆ: ಸಮಾಜವನ್ನು ಸತ್ಯ ಮತ್ತು ಶಾಂತಿಯ ಕಡೆಗೆ ಕೊಂಡೊಯ್ದು, ತಾವು ಅದೇ ಮಾರ್ಗದಲ್ಲಿ ನಡೆದ ಮಹಾನ್ ಚೇತನ ವರ್ಧಮಾನ ಮಹಾವೀರ ಎಂದು ಆಡಳಿತ ವೈದ್ಯಾಧಿಕಾರಿ ಡಾ ನಾಗರಾಜ್ ಹೇಳಿದರು.
ತಾಲ್ಲೂಕಿನ ಸಾಣೀಕೆರೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಮಹಾವೀರ ಜಯಂತಿಯ ಕಾರ್ಯಕ್ರಮದಲ್ಲಿ ಮಹಾವೀರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿಗೆ ಆಧ್ಯಾತ್ಮದ ಚಿಂತನೆಯನ್ನು ಜೈನ ಧರ್ಮದ 24ನೇ ತೀರ್ಥಂಕರರಾದ ಮಹಾವೀರರು ನೀಡಿದ್ದಾರೆ ಎಂದು ತಿಳಿಸಿದರು.
ಮಹಾವೀರರ ತತ್ವ, ಮೌಲ್ಯ ಮತ್ತು ಅವರು ಬೋಧಿಸಿದ 5 ಪಂಚಶೀಲ ತತ್ವಗಳಾದ ಸತ್ಯ, ಅಹಿಂಸೆ, ಅಪರಿಗ್ರಹ, ಕ್ಷಮೆ ಮತ್ತು ಬ್ರಹ್ಮಚರ್ಯವನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲಿ ಸುಖ ಶಾಂತಿಯಿಂದ ಸಹಬಾಳ್ವೆಯಿಂದ ಜೀವನ ನಡೆಸಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಸ್ಪತ್ರೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಉಪಸ್ಥಿತರಿದ್ದರು.

