ಚಳ್ಳಕೆರೆ : ಗ್ರಾಮೀಣ ಜನತೆಗೆ ಶುದ್ಧ ನೀರು: ಹೊಸದುರ್ಗದ ಬಹುಗ್ರಾಮ ಯೋಜನೆ ವೀಕ್ಷಿಸಿದ ಡಾ. ಆಕಾಶ್ ಎಸ್
. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಡಾ. ಆಕಾಶ್ ಎಸ್. ರವರು ಹೊಸದುರ್ಗ ತಾಲ್ಲೂಕಿನ ಸಮೀಪದಲ್ಲಿ ನಿರ್ಮಾಣ ಹಂತದಲ್ಲಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದರು.ಈ ಸಂದರ್ಭದಲ್ಲಿ ಕಾಮಗಾರಿಯ ಪ್ರಗತಿ, ತಾಂತ್ರಿಕ ಗುಣಮಟ್ಟ, ಬಳಸಲಾಗುತ್ತಿರುವ ಸಾಮಗ್ರಿಗಳ ಮಾನದಂಡ ಹಾಗೂ ಯೋಜನೆ ಪೂರ್ಣಗೊಳಿಸುವ ಗಡುವಿನ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಯೋಜನೆಯು ಗ್ರಾಮೀಣ ಪ್ರದೇಶದ ಜನತೆಗೆ ದೀರ್ಘಕಾಲ ಶುದ್ಧ ಹಾಗೂ ಸಮರ್ಪಕ ಕುಡಿಯುವ ನೀರು ಒದಗಿಸುವ ಮಹತ್ವದ ಯೋಜನೆಯಾಗಿರುವುದರಿಂದ ಯಾವುದೇ ರೀತಿಯ ಅಸಮರ್ಪಕತೆಗಳಿಗೆ ಅವಕಾಶ ನೀಡಬಾರದು ಎಂದು ಸೂಚನೆ ನೀಡಿದರು.ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಶೀಘ್ರ ಲಾಭವಾಗುವಂತೆ ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅಲ್ಲದೇ, ಕಾಮಗಾರಿ ವೇಳೆ ಪರಿಸರ ಸಂರಕ್ಷಣೆ, ಸುರಕ್ಷತಾ ಕ್ರಮಗಳು ಹಾಗೂ ನೀರಿನ ಮೂಲಗಳ ರಕ್ಷಣೆಗೂ ಹೆಚ್ಚಿನ ಒತ್ತು ನೀಡುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಂಬಂಧಿಸಿದ ಇಲಾಖೆಯ ಇಂಜಿನಿಯರ್‌ಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದು, ಕಾಮಗಾರಿಯ ವಿವಿಧ ಹಂತಗಳ ಕುರಿತು ವಿವರಿಸಿದರು.

