“ಉಪನಿಷತ್ತುಗಳು ಭಾರತೀಯ ಸನಾತನ ಪರಂಪರೆಯ ಅಸ್ಮಿತೆ”:-ಪೂಜ್ಯ ವೈ ರಾಜಾರಾಮ್ ಗುರುಗಳು ಅಭಿಮತ. ಚಳ್ಳಕೆರೆ:- ಉಪನಿಷತ್ತುಗಳು ಭಾರತೀಯ ಸನಾತನ ಪರಂಪರೆಯ ಅಸ್ಮಿತೆಯಾಗಿವೆ ಎಂದು ಚಳ್ಳಕೆರೆಯ ನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪೂಜ್ಯ ವೈ ರಾಜಾರಾಮ್ ಗುರುಗಳು ಅಭಿಪ್ರಾಯಪಟ್ಟರು. ನಗರದ ಬೆಂಗಳೂರು ರಸ್ತೆಯ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ “ಈಶಾವಾಸ್ಯ ಉಪನಿಷತ್” ಎಂಬ ವಿಷಯದ ಕುರಿತಾಗಿ ಆಯೋಜಿಸಿದ್ದ ವಿಶೇಷ ಪ್ರವಚನ ಮಾಲಿಕೆಯ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಉಪನಿಷತ್ತುಗಳಲ್ಲಿ ಬರುವ ಈಶಾವಾಸ್ಯ ಉಪನಿಷತ್ ಶುಕ್ಲ ಯಜುರ್ವೇದದ ವಾಜಸನೀಯ ಸಂಹಿತೆಯಲ್ಲಿ ಬರುವುದು.ಇದರ ಮೊದಲೇ ಶ್ಲೋಕ “ಈಶಾವಾಸ್ಯ” ಎಂಬುವುದುರಿಂದ ಪ್ರಾರಂಭವಾಗುವುದರಿಂದ ಇದಕ್ಕೆ ಅದೇ ಹೆಸರು ಬಂದಿದೆ.ಈ ಉಪನಿಷತ್ ಸಣ್ಣದು, ಕೇವಲ ಹದಿನೆಂಟು ಶ್ಲೋಕಗಳನ್ನು ಮಾತ್ರ ಒಳಗೊಂಡಿದೆ.ಆದರೆ ಇದೊಂದು ಅತಿ ಮುಖ್ಯವಾದ ಉಪನಿಷತ್ತು.ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ.ಇಲ್ಲಿ ಜ್ಞಾನ ಮತ್ತು ಕರ್ಮಗಳಿಗೆ ಒಂದು ಸಾಮರಸ್ಯ ಇರುವುದನ್ನು ನೋಡುತ್ತೇವೆ.ಪ್ರವೃತ್ತಿ ಮಾರ್ಗ ಮತ್ತು ನಿವೃತ್ತಿ ಮಾರ್ಗ,ಸಗುಣ- ನಿರ್ಗುಣ ಇವುಗಳನ್ನೆಲ್ಲ ಒಂದು ಸಾಮರಸ್ಯಕ್ಕೆ ತಂದಿದೆ.ಅದರಂತೆಯೇ ತತ್ತ್ವ ಮತ್ತು ಉಪಾಸನೆಗಳೆರಡೂ ಇಲ್ಲಿ ಇರುವುದನ್ನು ನೋಡುತ್ತೇವೆ. ಹಾಗೆಯೇ ಸ್ವಪ್ರಯತ್ನ ಮತ್ತು ಭಗವಂತನ ಕೃಪೆ ಎರಡೂ ಗಾಡಿಗೆ ಕಟ್ಟಿದ ಎರಡು ಎತ್ತಿನಂತೆ ಇರುವುದನ್ನು ನೋಡುತ್ತೇವೆ.ಇಷ್ಟು ಸಣ್ಣ ಉಪನಿಷತ್ತಿನಲ್ಲಿ ಇಷ್ಟೊಂದು ಮಹತ್ವದ ವಿಷಯಗಳನ್ನೆಲ್ಲ ಅಡಕಗೊಳಿಸಿದ್ದಾರೆ, ಆದ್ದರಿಂದ ಇಂತಹ ಉಪನಿಷತ್ತುಗಳ ಅನುಸಂಧಾನ ಅಗತ್ಯ ಎಂದು ಅವರು ತಿಳಿಸಿದರು.ಈ ಪ್ರವಚನ ಕಾರ್ಯಕ್ರಮಕ್ಕೆ ಮೊದಲು ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನಾ ಕಾರ್ಯಕ್ರಮ ಹಾಗೂ ಆರತಿ ನಡೆಯಿತು.ಈ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ, ಸದ್ಭಕ್ತರಾದ ಮಾಕಂ ಶ್ರೀನಿವಾಸಲು,ಹೂವಿನ ಲಕ್ಷ್ಮೀದೇವಮ್ಮ , ವಸಂತಕುಮಾರಿ, ಗಂಗಾಂಬಿಕೆ ರವಿ, ಶ್ರೀಮತಿ ಮಾಣಿಕ್ಯ ಸತ್ಯನಾರಾಯಣ, ಗೀತಾ ನಾಗರಾಜ್, ಯಶೋಧಾ ಪ್ರಕಾಶ್, ರತ್ನಮ್ಮ ಚೆನ್ನಬಸಪ್ಪ, ಮಂಜುಳ ನಾಗರಾಜ್, ಯತೀಶ್ ಎಂ ಸಿದ್ದಾಪುರ, ಸರಸ್ವತಮ್ಮ ಗೋವಿಂದರಾಜ್, ಗೀತಾ ಭಕ್ತವತ್ಸಲ, ವಿಶಾಲಾಕ್ಷಿ ಪುಟ್ಟಣ್ಣ,ಅಂಬುಜಮ್ಮ, ಉಷಾ ಶ್ರೀನಿವಾಸ,ಗಿರಿಜಾ, ಜಗದಂಬಾ,ವನಜಾಕ್ಷಿ ಮೋಹನ್, ಜಯಮ್ಮ , ಡಾ.ಭೂಮಿಕ, ಸಂತೋಷ್, ಚೆನ್ನಕೇಶವ, ಚೇತನ್, ಸುಕೃತಿ ಸೇರಿದಂತೆ ಶ್ರೀಶಾರದಾಶ್ರಮ ಹಾಗೂ ನರಹರಿ ಸದ್ಗುರು ಆಶ್ರಮದ ಸದ್ಭಕ್ತರು ಭಾಗವಹಿಸಿದ್ದರು.

