ಚಳ್ಳಕೆರೆ: ವೇದಾವತಿ ನದಿಯಲ್ಲಿ ತೆಪ್ಪ ಮುಗುಚಿ ಅಪಘಾತ – ಒಬ್ಬ ಬಾಲಕ ನಾಪತ್ತೆ
ಚಳ್ಳಕೆರೆ ತಾಲೂಕಿನ ವೇದಾವತಿ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಮೂವರು ಸಹೋದರರ ತೆಪ್ಪ ಮಗುಚಿದ ಪರಿಣಾಮ ಇಬ್ಬರು ಪಾರಾಗಿದ್ದು, ಒಬ್ಬ ಬಾಲಕ ನೀರಿನಲ್ಲಿ ನಾಪತ್ತೆಯಾಗಿರುವ ದುರ್ಘಟನೆ ಮಂಗಳವಾರ ನಡೆದಿದೆ.
ಹಿರಿಯೂರು ತಾಲೂಕಿನ ಓಬಳಾಪುರ ತಾಂಡದ ಒಂದೇ ಕುಟುಂಬದ ಯಶವಂತ್, ಬಾಲಾಜಿ ಹಾಗೂ ಧನುಷ್ ಎಂಬ ಮೂರು ಜನ ಸಹೋದರರು ತೆಪ್ಪದಲ್ಲಿ ಮೀನು ಹಿಡಿಯಲು ನದಿಗೆ ತೆರಳಿದ್ದರು. ಈ ವೇಳೆ ತೆಪ್ಪ ಏಕಾಏಕಿ ಮಗುಚಿ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಯಶವಂತ್ ಹಾಗೂ ಬಾಲಾಜಿ ಈಜುತ್ತಾ ಜೀವ ಉಳಿಸಿಕೊಂಡಿದ್ದು, ಧನುಷ್ ನದಿಯಲ್ಲಿ ನಾಪತ್ತೆಯಾಗಿದ್ದಾನೆ.
ಬುಧವಾರವೂ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಈಜು ತಜ್ಞರಿಂದ ನದಿಯಲ್ಲಿ ಶೋಧ ಕಾರ್ಯ ಮುಂದುವರಿದಿದೆ. ಸ್ಥಳಕ್ಕೆ ಚಳ್ಳಕೆರೆ ಹಾಗೂ ಪರಶುರಾಂಪುರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ.

