ಬಡವರ ಬಂಧು ಡಿ.ಸುಧಾಕರ್ ಇನ್ನಿಲ್ಲ: ಚಳ್ಳಕೆರೆಯಲ್ಲಿ ಶೋಕ ಸಾಗರ
ಚಳ್ಳಕೆರೆ: ಬಡವರ ಬಂಧು, ಜನನಾಯಕ ಹಾಗೂ ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಸಚಿವ ಡಿ. ಸುಧಾಕರ್ ಅವರ ನಿಧನದ ಸುದ್ದಿ ಚಳ್ಳಕೆರೆ ಸೇರಿದಂತೆ ಜಿಲ್ಲೆ, ರಾಜ್ಯಾದ್ಯಂತ ತೀವ್ರ ದುಃಖದ ವಾತಾವರಣ ಸೃಷ್ಟಿಸಿದೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.
ಸಚಿವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಕಂಬನಿ ಮಿಡಿದಿದ್ದಾರೆ. ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯಲ್ಲಿರುವ ಅವರ ನಿವಾಸದ ಬಳಿ ನೀರವ ಮೌನ ಆವರಿಸಿದ್ದು, ಸಾವಿರಾರು ಜನರು ಅಂತಿಮ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ.
ಕುಟುಂಬದ ಮೂಲಗಳ ಪ್ರಕಾರ, ಜೈನ ಧರ್ಮದ ಸಂಪ್ರದಾಯದಂತೆ ಸೋಮವಾರ ಸಂಜೆ ಅಂತ್ಯಕ್ರಿಯೆ ನೆರವೇರಲಿದೆ. ಚಿತ್ರದುರ್ಗ ರಸ್ತೆಯಲ್ಲಿರುವ ಡಿ.ಸುಧಾಕರ್ ಶಟಲ್ ಬ್ಯಾಡ್ಮಿಂಟನ್ ಕೋರ್ಟ್ ಆವರಣದಲ್ಲಿ ವಿಧಿವಿಧಾನಗಳು ನಡೆಯಲಿವೆ ಎಂದು ತಿಳಿದುಬಂದಿದೆ. ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆ ನಡೆಯುವ ಸ್ಥಳಗಳಲ್ಲಿ ನಗರಸಭೆ ವತಿಯಿಂದ ಸಿದ್ಧತಾ ಕಾರ್ಯಗಳು ಭರದಿಂದ ಸಾಗುತ್ತಿವೆ.
“ನಮ್ಮನ್ನು ಸಾಕಿ ಬೆಳೆಸಿದ ನಾಯಕ ಡಿ.ಸುಧಾಕರ್ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾರೆ. ಜನಸೇವೆ ಮಾಡುವಂತಹ ಮತ್ತೊಬ್ಬ ವ್ಯಕ್ತಿ ಮತ್ತೆ ಹುಟ್ಟಿ ಬರಲಿ” ಎಂದು ಅಭಿಮಾನಿಗಳು ಕಂಬನಿ ಮಿಡಿದರು.
ರಾಜಕೀಯ ಪ್ರವೇಶ ಮಾಡಿದ ದಿನಗಳಿಂದಲೇ ಡಿ.ಸುಧಾಕರ್ ಅವರು ಕಾರ್ಯಕರ್ತರ ಸಭೆಗಳು, ಸಾರ್ವಜನಿಕ ಸಂಪರ್ಕ ಕಾರ್ಯಕ್ರಮಗಳು ಹಾಗೂ ಜನಸೇವೆಯಲ್ಲಿ ಸದಾ ತೊಡಗಿಸಿಕೊಂಡಿದ್ದರು.
ವಿಶೇಷವಾಗಿ ಚಿತ್ರದುರ್ಗ ರಸ್ತೆಯಲ್ಲಿರುವ ಅವರ ಸೆಟಲ್ಕೋರ್ಟ್ ಆವರಣ ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿತ್ತು. ಅವರ ಅಗಲಿಕೆಯಿಂದ ಚಳ್ಳಕೆರೆ ರಾಜಕೀಯ ಅಂಗಳದಲ್ಲಿ ತುಂಬಲಾರದ ಶೂನ್ಯ ಉಂಟಾಗಿದೆ.
ಪೊಲೀಸ್ ಇಲಾಖೆ ಹಾಗೂ ತಾಲೂಕು ಆಡಳಿತವು ಸಾರ್ವಜನಿಕರ ಅಂತಿಮ ದರ್ಶನ ಮತ್ತು ಅಂತ್ಯಸಂಸ್ಕಾರ ಕಾರ್ಯಕ್ರಮಗಳು ಶಾಂತಿಯುತವಾಗಿ ನಡೆಯಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿವೆ.

