ಚಳ್ಳಕೆರೆ : ರಸ್ತೆ, ಚರಂಡಿ ಹಾಗೂ ಖಾಲಿ ನಿವೇಶನಗಳಲ್ಲಿ ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬೀದಿಗಳಲ್ಲಿ ದನಗಳನ್ನು ಬಿಡುವವರಿಗೂ ದಂಡ ವಿಧಿಸಲಾಗುವುದು ಆದ್ದರಿಂದ ಸಾರ್ವಜನಿಕರ ಸಹಕಾರ ಅತಿ ಮುಖ್ಯ ಎಂದು ಚಳ್ಳಕೆರೆ ನಗರಸಭೆ ಪೌರಾಯುಕ್ತೆ ಡಾ. ನಾಗವೇಣಿ ಮನವಿ ಮಾಡಿದ್ದಾರೆ.

ನಗರಸಭೆ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಮುಖ್ಯ ರಸ್ತೆಗಳ ಅಗಲೀಕರಣ ಕಾರ್ಯ ಶೀಘ್ರವೇ ಆರಂಭವಾಗಲಿದೆ. ಶಿಥಿಲಾವಸ್ಥೆಯಲ್ಲಿರುವ ನಗರಸಭೆ ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಲಾಗುವುದು ಎಂದು ತಿಳಿಸಿದರು. ರಸ್ತೆ, ಚರಂಡಿ ಹಾಗೂ ಖಾಲಿ ನಿವೇಶನಗಳಲ್ಲಿ ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬೀದಿಗಳಲ್ಲಿ ದನಗಳನ್ನು ಬಿಡುವವರಿಗೂ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು. ಈಗಾಗಲೇ ಬೀದಿಯಲ್ಲಿರುವ ದನಗಳನ್ನು ವಶಕ್ಕೆ ಪಡೆದು ಗೋಶಾಲೆಗೆ ಸಾಗಿಸುವ ಕ್ರಮ ಆರಂಭಿಸಲಾಗಿದೆ ಎಂದರು.
ನಗರದ ಸಮಗ್ರ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಅಗತ್ಯವಿದ್ದು, ಎಲ್ಲರೂ ನಗರಸಭೆಯೊಂದಿಗೆ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಇದಕ್ಕೂ ಮುನ್ನ ನಗರದ ಉತ್ತರ ಪಿನಾಕಿನಿ ನದಿ ಸೇತುವೆ ಬಳಿ ಪೌರಕಾರ್ಮಿಕರಿಂದ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಾರ್ಡ್‌ವಾರು ಚರಂಡಿ ಮತ್ತು ಖಾಲಿ ನಿವೇಶನಗಳ ಸ್ವಚ್ಛತಾ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ಮನೆಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಪ್ರತಿದಿನ ಮನೆ ಬಾಗಿಲಿಗೆ ಬರುವ ನಗರಸಭೆಯ ಕಸ ಶೇಖರಣಾ ವಾಹನಕ್ಕೆ ನೀಡಬೇಕು. ಸಾರ್ವಜನಿಕರು ಸಹಕರಿಸಿದರೆ ಮಾತ್ರ ರಸ್ತೆ ಹಾಗೂ ವಾರ್ಡ್‌ಗಳಲ್ಲಿ ಶಾಶ್ವತ ಸ್ವಚ್ಛತೆ ಸಾಧ್ಯ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಆರೋಗ್ಯಾಧಿಕಾರಿಗಳಾದ ಮಹಾಲಿಂಗಪ್ಪ, ಗೀತಾಕುಮಾರಿ ಹಾಗೂ ಭೂತಣ್ಣ ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!