ಸಚಿವ ಡಿ.ಸುಧಾಕರ್ ಅಂತಿಮ ದರ್ಶನಕ್ಕೆ ಅಭಿಮಾನಿಗಳ ಸಾಗರ
ಚಳ್ಳಕೆರೆ: ಅನಾರೋಗ್ಯದಿಂದ ನಿಧನರಾದ ರಾಜ್ಯ ಸಚಿವ ಡಿ.ಸುಧಾಕರ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಸಾರ್ವಜನಿಕರು, ಅಭಿಮಾನಿಗಳು ಹಾಗೂ ವಿವಿಧ ರಾಜಕೀಯ ಮುಖಂಡರು ಭಾರೀ ಸಂಖ್ಯೆಯಲ್ಲಿ ಆಗಮಿಸಿದ ದೃಶ್ಯ ಮನಕಲಕುವಂತಿತ್ತು.
ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯಲ್ಲಿರುವ ಸಚಿವರ ಸ್ವಗೃಹದಲ್ಲಿ ಭಾನುವಾರ ಸಂಜೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಹಿರಿಯೂರು ಕ್ಷೇತ್ರದ ಜನರಿಗೆ ಅಂತಿಮ ದರ್ಶನ ಕಲ್ಪಿಸಿದ ಬಳಿಕ ಸಂಜೆ ಸುಮಾರು 7 ಗಂಟೆ ವೇಳೆಗೆ ಪಾರ್ಥಿವ ಶರೀರವನ್ನು ಚಳ್ಳಕೆರೆಯ ಸ್ವಗೃಹಕ್ಕೆ ತರಲಾಯಿತು.
ಈ ವೇಳೆ ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಕಣ್ಣೀರಿನಿಂದ ತಮ್ಮ ಪ್ರೀತಿಯ ನಾಯಕರಿಗೆ ಅಂತಿಮ ನಮನ ಸಲ್ಲಿಸಿದರು.
ಸ್ವಗೃಹದ ಮುಂಭಾಗದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಜನರು ಸರದಿ ಸಾಲಿನಲ್ಲಿ ನಿಂತು ಅಂತಿಮ ದರ್ಶನ ಪಡೆದರು. ಮಹಿಳೆಯರು ಹಾಗೂ ಹಿರಿಯ ನಾಗರಿಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
“ಬಡವರ ಬಂಧು”, “ಜನನಾಯಕ ಸುಧಾಕರ್ ಅಮರರಾಗಲಿ” ಎಂಬ ಸ್ಮರಣೆಗಳು ಕೇಳಿಬಂದವು.
ಈ ಸಂದರ್ಭದಲ್ಲಿ ಶಾಸಕ ಟಿ.ರಘುಮೂರ್ತಿ, ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಸೇರಿದಂತೆ ಹಲವು ಜನಪ್ರತಿನಿಧಿಗಳು, ಮುಖಂಡರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿ ಪುಷ್ಪಾರ್ಚನೆ ಸಲ್ಲಿಸಿದರು.
ಸಚಿವರ ಅಕಾಲಿಕ ನಿಧನದಿಂದ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಮುಖಂಡರು ಸಂತಾಪ ವ್ಯಕ್ತಪಡಿಸಿದರು.
ಸಚಿವ ಡಿ.ಸುಧಾಕರ್ ಅವರು ಜನಸಾಮಾನ್ಯರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿದ್ದ ಜನನಾಯಕರೆಂದು ಅಭಿಮಾನಿಗಳು ಸ್ಮರಿಸಿದರು. ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲೆಯಾದ್ಯಂತ ದುಃಖದ ವಾತಾವರಣ ನಿರ್ಮಾಣವಾಗಿದೆ.

