ವಚನ ಪಾಲನೆಗೆ ಮಾದರಿ ಪಕ್ಷ ಕಾಂಗ್ರೆಸ್

ಮಾಜಿ ಸಚಿವ ಎಚ್.ಆಂಜನೇಯ ಹೇಳಿಕೆ

ಚಿತ್ರದುರ್ಗ, ಆ. 29: ಚುನಾವಣೆ ಸಂದರ್ಭ ಜನರಿಗೆ ನೀಡಿದ ವಚನಗಳನ್ನು ಪಾಲಿಸುತ್ತಿರುವ ದೇಶದ ಏಕೈಕ ಪಕ್ಷ ಕಾಂಗ್ರೆಸ್ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.

ಈ ಸಂಬಂಧ ಮಂಗಳವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್ ಪಕ್ಷದ ವಿರುದ್ಧ ಸುಳ್ಳು ಆರೋಪ ಮಾಡಿ, ಜನರ ಮನಸ್ಸಿನಲ್ಲಿ ಸುಳ್ಳಿನ ಗೋಪುರ ಕಟ್ಟಿ ಕೇಂದ್ರದಲ್ಲಿ  ಅಧಿಕಾರಕ್ಕೆ ಬಂದಿರುವ ಬಿಜೆಪಿ ಜನವಿರೋಧಿ ಆಡಳಿತದಲ್ಲಿ ತೊಡಗಿದೆ ಎಂದು ದೂರಿದ್ದಾರೆ.

ಕಬ್ಬಿಣ, ಸೀಮೆಂಟ್, ಇಂಧನ ಸೇರಿ ಅಗತ್ಯ ವಸ್ತುಗಳು ಕಾಂಗ್ರೆಸ್ ಆಡಳಿತದಲ್ಲಿ ಗಗನಕ್ಕೆ ಏರಿವೆ. ನಿರುದ್ಯೋಗ ಹೆಚ್ಚಾಗಿದೆ. ನಮಗೆ ಅಧಿಕಾರ ಕೊಟ್ಟರೇ ಎಲ್ಲ ವಸ್ತುಗಳ ಬೆಲೆ ಇಳಿಕೆ ಮಾಡುತ್ತೇವೆ, ಪ್ರತಿ ವ್ಯಕ್ತಿ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ಹಾಕುತ್ತೆವೆ, ಪೆಟ್ರೋಲ್, ಡಿಸೇಲ್ ಜನ ಸಾಮಾನ್ಯರ ಕೈಗೆಟುಕುವ ರೀತಿ ಬೆಲೆ ಇಳಿಸುತ್ತೇವೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಠಿ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ, ಎಂಟು ವರ್ಷದಲ್ಲಿ ತಾನು ಹೇಳಿದ್ದ ಭರವಸೆಗಳಲ್ಲಿ ಒಂದನ್ನು ಈಡೇರಿಸಿಲ್ಲ. ಬದಲಿಗೆ ಸರ್ಕಾರಿ ಸಂಸ್ಥೆಗಳನ್ನು ಮಾರಾಟ ಮಾಡಲಾಗಿದೆ, ಸಣ್ಣ-ಮಧ್ಯಮ ಕೈಗಾರಿಕೆಗಳನ್ನು ಮುಚ್ಚಲಾಗಿದೆ. ಈ ಮೂಲಕ ದೇಶದಲ್ಲಿ ನಿರುದ್ಯೋಗ ಹೆಚ್ಚಳ ಮಾಡಿರುವುದೇ ಬಿಜೆಪಿ ಸಾಧನೆ ಆಗಿದೆ.
ಇನ್ನೂ ಅಗತ್ಯ ವಸ್ತುಗಳ ಬೆಲೆ ಮೂರು ಪಟ್ಟು ಹೆಚ್ಚಿಸಲಾಗಿದೆ. 400 ರೂಪಾಯಿ ಇದ್ದ ಸಿಲಿಂಡರನ್ನು ಒಂದು ಸಾವಿರಕ್ಕಿಂತಲೂ ಹೆಚ್ಚು ಹೆಚ್ಚಿಸಿ, ಮಧ್ಯಮ ವರ್ಗದ ಜನರ ಬದುಕನ್ನು ಸಂಕಷ್ಟಕ್ಕೆ ದೂಡಿರುವುದೇ ಬಿಜೆಪಿ ಮತ್ತು ಮೋದಿ ಸಾಧನೆ ಆಗಿದೆ ಎಂದು

ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೆಟ್ರೋಲ್, ಡಿಸೇಲ್ ಬೆಲೆ ಗಗನಕ್ಕೆ ಏರಿಸಿ ಎಲ್ಲ ಕ್ಷೇತ್ರಕ್ಕೆ ಆರ್ಥಿಕ ಪೆಟ್ಟು ನೀಡುವ ಮೂಲಕ ಜನರ ಬದುಕನ್ನು ಮೂರಾಬಟ್ಟೆ ಮಾಡಿದೆ.
ದುಡಿಯಲು ಕೆಲಸ ಮತ್ತು ಕೈಯಲ್ಲಿ ದುಡ್ಡಿಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಜನರ ನೆರವಿಗಾಗಿ ಕಾಂಗ್ರೆಸ್ ಸರ್ಕಾರ  ರಾಜ್ಯದಲ್ಲಿ ಅನೇಕ ಜನಪರ ಯೋಜನೆಗಳ ಜೊತೆಗೆ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ, ಬಡ ಮತ್ತು ಮಧ್ಯಮ ವರ್ಗದ ಕುಟುಂಬಕ್ಕೆ ಅನ್ನಭಾಗ್ಯ ಅಕ್ಕಿ ಜೊತೆಗೆ ಹಣ ಸಂದಾಯ, ರಾಜ್ಯದ ಬಹುತೇಕ ಎಲ್ಲರ ಮನೆಗಳಿಗೆ ಉಚಿತ ವಿದ್ಯುತ್ ನೀಡಿದೆ. ಇದರ ಜೊತೆಗೆ ಸಿಲಿಂಡರ್ ಹಾಗೂ ಅಗತ್ಯ ವಸ್ತುಗಳನ್ನು ಖರೀದಿಸಲು, ಮಕ್ಕಳ ಶಿಕ್ಷಣಕ್ಕೆ ಅನುಕೂಲಕ್ಕಾಗಿ ಪ್ರತಿ ಕುಟುಂಬದ ಮನೆ ಯಜಮಾನಿ ಖಾತೆಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆ ಜಾರಿಗೆ ಕ್ಷಣಹಣನೆ ಆರಂಭವಾಗಿದೆ.

ಬಿಜೆಪಿ ದುರಾಡಳಿತದಿಂದ ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳಿಗೆ ಗೃಹಲಕ್ಷ್ಮೀ ಯೋಜನೆ ವರದಾನ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಆಗಸ್ಟ್ 30ರಂದು ರಾಷ್ಟ್ರ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲಿದ್ದು, ಆ ತಕ್ಷಣವೇ ರಾಜ್ಯದ ಎಲ್ಲ ಫಲಾನುಭವಿಗಳಾದ ಮಹಿಳೆಯರ ಬ್ಯಾಂಕ್ ಖಾತೆಗೆ ತಲಾ ಎರಡು ಸಾವಿರ ರೂಪಾಯಿ ನೇರ ಜಮಾ ಆಗಲಿದೆ.
ದೇಶದ ಇತಿಹಾಸದ ಪುಟಗಳಲ್ಲಿ ಬರೆದಿಡುವಂತಹ  ಮಹತ್ವಾಕಾಂಕ್ಷೆ ಗೃಹಲಕ್ಷ್ಮೀ ಯೋಜನೆ ಜಾರಿ ಕಾರ್ಯಕ್ರಮದ ನೇರ ಪ್ರಸಾರವನ್ನು ಗ್ರಾಮ ಪಂಚಾಯತಿ ಹಾಗೂ ನಗರ, ಪಟ್ಟಣ ಕೇಂದ್ರದಲ್ಲಿ ವ್ಯವಸ್ಥೆ ಮಾಡಿದ್ದು, ಫಲಾನುಭವಿ ಮಹಿಳೆಯರು ಕಾರ್ಯಕ್ರಮವನ್ನು ವೀಕ್ಷಿಸುವ ಮೂಲಕ ಹಾಗೂ ತಮ್ಮ ಖಾತೆಗೆ ಎರಡು ಸಾವಿರ ರೂಪಾಯಿ ಜಮಾ ಆಗುವ ಸಂದರ್ಭ ಸಂಭ್ರಮಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಇನ್ನೂ ಹೆಚ್ಚು ಸಂಖ್ಯೆಯಲ್ಲಿ ಜನಪರ ಯೋಜನೆಗಳನ್ನು ಜಾರಿಗೊಳಿಸಲು ಉತ್ಸಾಹ ತುಂಬುವ ಜೊತೆಗೆ ಬೆಂಬಲವಾಗಿ ನಿಲ್ಲಬೇಕು ಎಂದು ಆಂಜನೇಯ ಕೋರಿದ್ದಾರೆ.

Namma Challakere Local News
error: Content is protected !!