ಚಿತ್ರದುರ್ಗ: ಬದಲಾಗುತ್ತಿರುವ ಮಾಧ್ಯಮ ಕ್ಷೇತ್ರದಲ್ಲಿಯೂ ಸಾಮಾಜಿಕ ಹೊಣೆಗಾರಿಕೆ ಅರಿತು, ನಮ್ಮ ಜವಾಬ್ದಾರಿಯನ್ನು ನಮಗೆ ನಾವೇ ಅರ್ಥೈಸಿಕೊಂಡಾಗ ಮಾತ್ರ ಒಬ್ಬ ಉತ್ತಮ ಪತ್ರಕರ್ತರಾಗಲು ಸಾಧ್ಯವಾಗಲಿದೆ ಎಂದು ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಸುದ್ದಿಯ ಸತ್ಪರಿಣಾಮ, ದುಷ್ಪಾರಿಣಾಮ ಎರಡನ್ನೂ ಗಮನದಲ್ಲಿಟ್ಟುಕೊಂಡು, ದುಷ್ಪರಿಣಾಮದ ಬದಲಾಗಿ ಸತ್ಪರಿಣಾಮವಾಗುವ ನಿಟ್ಟಿನಲ್ಲಿ ಮಾಧ್ಯಮ ಚಿಂತನೆ ಮಾಡಬೇಕಿದೆ. ಸಾಮಾಜಿಕ ಹೊಣೆಗಾರಿಕೆ ಅರಿತು ಸಮಾಜದ ಸ್ವಾಸ್ಥ್ಯಕ್ಕಾಗಿ, ಸಮಾಜದ ಉದ್ದಾರಕ್ಕೆ ಚಿಂತನೆ ಮಾಡುವ ಸೇವೆ ಸಲ್ಲಿಸಬೇಕು. ಇದರಿಂದ ಮಾಧ್ಯಮ ಕ್ಷೇತ್ರದ ಪಾವಿತ್ರ್ಯತೆ ಎಂದಿಗೂ ಕಡಿಮೆ ಆಗುವುದಿಲ್ಲ ಎಂದು ಹೇಳಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಮಾತನಾಡಿ, ಸರ್ಕಾರದ ಯೋಜನೆಗಳು, ಜನಸಾಮಾನ್ಯರಿಗೆ ಕೆಲವು ವಿಷಯ, ಮಾಹಿತಿಗಳನ್ನು ತುರ್ತಾಗಿ ನಿತ್ಯವೂ ಮಾಧ್ಯಮದ ಮೂಲಕ ತಲುಪಿಸಲಾಗುತ್ತಿದೆ. ಪತ್ರಿಕೆ ಇಲ್ಲದೇ ಬದುಕಲು ಸಾಧ್ಯವಿಲ್ಲ. ನಿತ್ಯದ ಜೀವನದ ಜತೆಗೆ ಪತ್ರಿಕೆ ಹಾಸುಹೊಕ್ಕಾಗಿದೆ ಎಂದರು.
ಜನರಿಗೆ ತಿಳಿಸಬೇಕಾದ ವಿಷಯವನ್ನು ಸರಿಯಾದ ರೀತಿಯಲ್ಲಿ ನಿಖರ ಹಾಗೂ ಖಚಿತವಾಗಿ ಮಾಹಿತಿ ನೀಡಬೇಕು. ಮಾಧ್ಯಮ ಕೇವಲ ಸುದ್ದಿ, ಮಾಹಿತಿ ನೀಡುವುದು ಮಾತ್ರವಲ್ಲದೇ ಶಿಕ್ಷಣ, ಮನೋರಂಜನೆ ಸೇರಿದಂತೆ ಸುಮಾರು ವಿಷಯಗಳನ್ನು ಪ್ರಸಾರ ಮಾಡುತ್ತದೆ. ಜನರಿಗೆ ತಪ್ಪು ಮಾಹಿತಿ ನೀಡದೇ ಸರಿಯಾದ ವಿಷಯಗಳನ್ನು ತಿಳಿಸಬೇಕು. ಪತ್ರಿಕಾ ಧರ್ಮಕ್ಕೆ ಚ್ಯುತಿ ಬಾರದಂತೆ ಪತ್ರಕರ್ತರು ತಮ್ಮ ನೈತಿಕ ಮೌಲ್ಯಗಳನ್ನು ಕಾಪಾಡಿಕೊಂಡು ಹೋಗಬೇಕಿದೆ ಎಂದರು.
ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಮಾತನಾಡಿ, ಸಾಮಾಜಿಕ ಜಾಲತಾಣಗಳ ಬಳಕೆಯಿಂದಾಗಿ ಪ್ರಸ್ತುತ ದಿನಗಳಲ್ಲಿ ಮಾಧ್ಯಮ ಸ್ವರೂಪ ಬಹಳಷ್ಟು ಬದಲಾಗುತ್ತಿದೆ. ಸುದ್ದಿಗಳ ಪ್ರಸಾರಕ್ಕೂ ಮುನ್ನ ಸುದ್ದಿಯ ನೈಜತೆ ಹಾಗೂ ನಿಖರತೆಯನ್ನು ಪರಿಶೀಲಿಸಬೇಕು. ಹೀಗಾಗಿ ಪತ್ರಕರ್ತರೂ ತಮ್ಮ ಕಾರ್ಯವೈಖರಿ ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯು ಪತ್ರಕರ್ತರಿಗೆ ಬಹಳಷ್ಟು ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಪತ್ರಕರ್ತರಿಗೆ ಉಚಿತ ಬಸ್‍ಪಾಸ್ ಸೌಲಭ್ಯ, ಪಿಂಚಣಿ ಸೌಲಭ್ಯ, ಎಸ್.ಸಿ, ಎಸ್.ಟಿ, ಹಿಂದುಳಿದ ವರ್ಗ ಸೇರಿದಂತೆ ಎಲ್ಲ ವರ್ಗದ ಮಾಲೀಕತ್ವ, ಸಂಪಾದಕತ್ವದ ಪತ್ರಿಕೆಗಳಿಗೆ ಸರ್ಕಾರವು ಜಾಹೀರಾತು ನೀಡಿ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷ ಬಿ.ದಿನೇಶ ಗೌಡಗೆರೆ ಮಾತನಾಡಿ, ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು 1985ರಲ್ಲಿ ಸ್ಥಾಪನೆಯಾಯಿತು. ಪತ್ರಕರ್ತರ ಕಷ್ಟ-ಸುಖಗಳಿಗೆ ಸ್ಪಂದಿಸುವ ಕೆಲಸವನ್ನು ಸಂಘವು ಮಾಡುತ್ತಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ಪತ್ರಕರ್ತರ ಭವನ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದ್ದೇವೆ. ಸಂಘವು ಪತ್ರಕರ್ತರಿಗೆ ನಿವೇಶನ ಸೇರಿದಂತೆ ಸರ್ಕಾರದಿಂದ ಸಿಗುವ ಮುಖ್ಯಮಂತ್ರಿ ಪರಿಹಾರನಿಧಿ ಹಾಗೂ ಇನ್ನಿತರ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸುತ್ತಿದ್ದು, ಕಾರ್ಯನಿರತ ಪತ್ರಕರ್ತರ ಸಂಘವು ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಕನ್ನಡ ಪ್ರಭ ಹಿರಿಯ ವರದಿಗಾರ ಚಿಕ್ಕಪ್ಪನಹಳ್ಳಿ ಷಣ್ಮುಖ, ವಿಜಯ ಕರ್ನಾಟಕ ವರದಿಗಾರ ರಾಮಗಿರಿ ಯೋಗೀಶ್, ಹೊಸದಿಗಂತ ಚಳ್ಳಕೆರೆ ವರದಿಗಾರ ಡಿ.ಈಶ್ವರಪ್ಪ, ಪ್ರಜಾವಾಣಿ ಮೊಳಕಾಲ್ಮುರು ವರದಿಗಾರ ಕೊಂಡ್ಲಹಳ್ಳಿ ಜಯಪ್ರಕಾಶ್ ಅವರಿಗೆ ಸನ್ಮಾನಿಸಲಾಯಿತು. ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕøತರಾದ ಕನ್ನಡ ಸಂಪಿಗೆ ತಿಪ್ಪೇಸ್ವಾಮಿ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು ಹಾಗೂ ಎಸ್‍ಎಸ್‍ಎಲ್‍ಸಿ, ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಜಿ.ಸಿ.ಲೋಕೇಶ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಸಿದ್ದರಾಜು, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಯೋಗೇಶ್ ಸೇರಿದಂತೆ ಮಾಧ್ಯಮ ಪ್ರತಿನಿಧಿಗಳು, ಪತ್ರಿಕಾ ವಿತರಕರು ಇದ್ದರು.

Namma Challakere Local News
error: Content is protected !!