ಚಿತ್ರದುರ್ಗ ಜೂನ್.9:
ನಗರ ಪ್ರದೇಶಗಳಲ್ಲಿ ಡೆಂಗ್ಯೂ, ಚಿಕನ್‍ಗುನ್ಯಾ ಪ್ರಕರಣಗಳು ಹೆಚ್ಚು ಹೆಚ್ಚು ಕಂಡು ಬರುತ್ತಿದ್ದು ನಗರ ಲಾರ್ವ ಸಮೀಕ್ಷೆ ಗುಣಾತ್ಮಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಕಾಶಿ ತಿಳಿಸಿದರು.
ಇಲ್ಲಿನ ಬುದ್ಧ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಶುಕ್ರವಾರ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ ಮಾರುತಿ ನಗರ ವ್ಯಾಪ್ತಿಯಲ್ಲಿ ಕೀಟಜನ್ಯ ರೋಗಗಳ ನಿಯಂತ್ರಣಕ್ಕಾಗಿ ಕೈಗೊಳ್ಳಬೇಕಾದ ಲಾರ್ವ ಸಮೀಕ್ಷೆಯ ಕಾರ್ಯವು ಗುಣಮಟ್ಟದಲ್ಲಿ ನಿರ್ವಹಣೆ ಮಾಡಲು ಕ್ಷೇತ್ರಮಟ್ಟದ ಸಿಬ್ಬಂದಿಗಳಿಗೆ ಆಶಾ ಕಾರ್ಯಕರ್ತರಿಗೆ ತರಬೇತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
ನಗರ ಲಾರ್ವ ಸಮೀಕ್ಷೆಗೆ ವಾರ್ಡ್‍ವಾರು ಕ್ರಿಯಾಯೋಜನೆ ತಯಾರಿಸಲು ಮಾರ್ಗದರ್ಶನ ನೀಡಿದ ಅವರು, ಒಟ್ಟು ಮನೆಗಳ ಸಂಖ್ಯೆ ಅಗತ್ಯವಿರುವ ಮಾನವ ಸಂಪನ್ಮೂಲ ಮತ್ತು ಹೆಚ್ಚುವರಿಯಾಗಿ ಅವಶ್ಯಕತೆ ಇರುವ ಮಾನವ ಸಂಪನ್ಮೂಲಕ್ಕಾಗಿ ಸ್ಥಳೀಯ ನರ್ಸಿಂಗ್ ಕಾಲೇಜ್, ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಲಾರ್ವ ಸಮೀಕ್ಷೆಗೆ ಬಳಸಿಕೊಳ್ಳಲು ಸೂಚಿಸಿದರು.
ಕೀಟಜನ್ಯ ರೋಗಗಳಿಂದ ಉಂಟಾಗುವ ಪರಿಣಾಮಗಳನ್ನು ನಿಯಂತ್ರಣದಲ್ಲಿಡದಿದ್ದರೆ ಎದುರಿಸಬೇಕಾದಂತಹ ಸಮಸ್ಯೆಗಳನ್ನು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿ, ಲಾರ್ವ ಸಮೀಕ್ಷೆ ಮೇಲ್ವಿಚಾರಣೆಗಾಗಿ ತಾಲೂಕು ಮಟ್ಟದ ಮೇಲ್ವಿಚಾರಣ ಸಿಬ್ಬಂದಿಯನ್ನು ನಿಯೋಜಿಸುವುದಾಗಿ ಪ್ರತಿ 15 ದಿನಕ್ಕೊಮ್ಮೆ ನಗರದ ಮೂರು ನಗರ ಆರೋಗ್ಯ ಕೇಂದ್ರಗಳಲ್ಲೂ ಪ್ರಗತಿ ಪರಿಶೀಲನೆ ಸಭೆಯನ್ನು ಮಾಡುವುದಾಗಿ ತಿಳಿಸಿದರು.
ಕಾರ್ಯಗಾರದಲ್ಲಿ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ನಾಗರೀಕರ ಮನೋಭಾವನೆಗಳನ್ನು ಬದಲಾವಣೆ ಮಾಡಿ ಅಂತರ್ ವೈಯಕ್ತಿಕ ಸಂವಹನ ಕಲೆಗಳನ್ನ ಮಾಹಿತಿ ಶಿಕ್ಷಣ ಸಂವಹನ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ವಾರ್ಡ್‍ವಾರು ರೂಪಿಸಿಕೊಳ್ಳುವಂತೆ ತಿಳಿಸಿದರು.
ಕಾರ್ಯಗಾರದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಲ್ಲಿಕಾರ್ಜುನ್, ನಾಗರಾಜ್, ಶ್ರೀಧರ್, ಗುರುಮೂರ್ತಿ, ತಾಲೂಕು ವ್ಯವಸ್ಥಾಪಕ ಅಲಿ, ಆಶಾ ಬೋಧಕಿ ಪದ್ಮಜಾ, ಬುದ್ಧ ನಗರದ ಆರೋಗ್ಯ ಅಧಿಕಾರಿ ಡಾ. ಸುರೇಂದ್ರ ಕುಮಾರ್ ಸೇರಿದಂತೆ ಇತರರು ಇದ್ದರು.

Namma Challakere Local News
error: Content is protected !!