ಬೆಲೆ ಏರಿಕೆಗೆ ಜನ ತತ್ತರ
ಚಿತ್ರದುರ್ಗ, ಮಾ.27
ಸಿಲಿಂಡರ್, ಅಡುಗೆ ಎಣ್ಣೆ, ಬೇಳೆ ಕಾಳು ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಲ್ಲಿ ಕಾಂಗ್ರೆಸ್ ಪಕ್ಷ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ಹೊಳಲ್ಕೆರೆ ತಾಲೂಕಿನ ತೇಕಲವಟ್ಟಿ, ಉಪ್ಪರಿಗೇನಹಳ್ಳಿ, ಎಚ್.ಡಿ.ಪುರ, ಚಿತ್ರಹಳ್ಳಿ, ಟಿ.ನುಲೆನೂರಿನಲ್ಲಿ ಕಾಂಗ್ರೆಸ್ ಪಕ್ಷ ಸೋಮವಾರ ಹಮ್ಮಿಕೊಂಡಿದ್ದ ಗೃಹ ಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ ಗ್ಯಾರಂಟಿ ಕಾರ್ಡ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
200 ಯುನಿಟ್ ಉಚಿತ ವಿದ್ಯುತ್, ಕುಟುಂಬದ ಯಜಮಾನಿಗೆ ಮಾಸಿಕ 2000 ರೂ. ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಹಾಗೂ ಪದವೀಧರರಿಗೆ ರೂ.3000,ಡಿಪ್ಲೋಮಾ ಪದವೀಧರರಿಗೆ ರೂ.1500 ನೀಡಲು ಪಕ್ಷ ತೀರ್ಮಾನಿಸಿದ್ದು, ಈ ಮೂಲಕ ಬಿಜೆಪಿ ಸಂಕಷ್ಟಕ್ಕೆ ದೂಡಿರುವ ಜನರನ್ನು ಮೇಲೆತ್ತುವ ಕಾರ್ಯ ಮಾಡಲಿದೆ ಎಂದರು.
2013ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳಲ್ಲಿ ಶೇ.99ರಷ್ಟನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈಡೇರಿಸಿದೆ. ಈಗಲೂ ನೀಡಿರುವ ವಾಗ್ದಾನ ಅನುಷ್ಠಾನಕ್ಕೆ ತರುತ್ತೇವೆ. ಜನರ ಪರ ಆಡಳಿತ ಮಾಡುವುದು ಹೇಗೆ ಎಂಬುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಗೊತ್ತಿದೆ ಎಂದರು.
ವಿದೇಶದಿಂದ ಕಪ್ಪು ಹಣ ತರುವುದು ಸೇರಿ ನೂರಾರು ಸುಳ್ಳು ಹೇಳಿ ಕೇಂದ್ರದಲ್ಲಿ ಅಧಿಕಾರ ಹಿಡಿದಿದ್ದ ಬಿಜೆಪಿ, ರಾಜ್ಯದಲ್ಲಿ ಶಾಸಕರನ್ನು ಖರೀದಿಸಿ ಸರ್ಕಾರ ರಚಿಸಿದೆ. ಅದರ ಪರಿಣಾಮ ಭ್ರಷ್ಟಾಚಾರ ಮೀತಿಮೀರಿದೆ. ಹೊಳಲ್ಕೆರೆ ಕ್ಷೇತ್ರದಲ್ಲೂ ಕೂಡ ಗುತ್ತಿಗೆದಾರರು, ಅಧಿಕಾರಿಗಳು ತೀವ್ರ ಸಂಕಷ್ಟ, ಒತ್ತಡಕ್ಕೆ ಸಿಲುಕಿದ್ದಾರೆ. ಕೆರೆ, ರಸ್ತೆ ಅಭಿವೃದ್ಧಿ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ದೂರಿದರು.
ಈ ಸಂಬಂಧ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸುವಂತೆ ಈಗಾಗಲೇ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ. ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಆರಂಭದಲ್ಲಿಯೇ ಕ್ಷೇತ್ರದ ಎಲ್ಲ ಅವ್ಯವಹಾರಗಳನ್ನು ತನಿಖೆಗೆ ವಹಿಸಿ, ಭ್ರಷ್ಟರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಹೇಳಿದರು.
ಹೊಳಲ್ಕೆರೆ ಕ್ಷೇತ್ರದಲ್ಲಿ ಶಾಸಕರು ಯಾವುದೇ ಸಾಧನೆ ಮಾಡಿಲ್ಲ. ಈಗಲೂ ಮತ್ತೆ ಹೊಸ ಸುಳ್ಳು ಹೇಳುವ ಮೂಲಕ ಜನರನ್ನು ದಾರಿತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಆದರೆ, ಭ್ರಷ್ಟಚಾರ, ಸುಳ್ಳು ಭರವಸೆಗೆ ಬೇಸತ್ತಿರುವ ಜನತೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಕಾತರರಾಗಿದ್ದಾರೆ ಎಂದರು.
ಜಿಪಂ ಮಾಜಿ ಸದಸ್ಯ ಡಿ.ಕೆ.ಶಿವಮೂರ್ತಿ ಮಾತನಾಡಿ, ವಾಮಮಾರ್ಗದಲ್ಲಿ ಅಧಿಕಾರ ಹಿಡಿಯಲು ಯತ್ನಿಸುವ ಬಿಜೆಪಿ, ಸಮಾಜದಲ್ಲಿ ದ್ವೇಷ ಬಿತ್ತುತ್ತಿದೆ. ನಾಲ್ಕು ವರ್ಷ ಆಡಳಿತದಲ್ಲಿದ್ದ ಬಿಜೆಪಿ ಮೀಸಲಾತಿ ಕುರಿತು ನಿರ್ಣಯ ಕೈಗೊಳ್ಳದೆ, ಅಧಿಕಾರ ಕಳೆದುಕೊಂಡು ಮನೆಗೆ ಹೋಗುವ ಸಂದರ್ಭ ಕೊನೆ ಸಚಿವ ಸಂಪುಟದಲ್ಲಿ ಮೀಸಲಾತಿ ನಾಟಕ ಆಡಿದೆ ಎಂದು ಆರೋಪಿಸಿದರು.
ಜಾತ್ಯಾತೀತ ಭಾರತಕ್ಕೆ ತನ್ನದೇ ಆದ ಇತಿಹಾಸ ಇದೆ. ಇದಕ್ಕೆ ಧರ್ಮ, ಜಾತಿ ತಾರತಮ್ಯದ ಮೂಲಕ ಕಲ್ಲು ಹೊಡೆಯುವವರ ಬಗ್ಗೆ ಜಾಗೃತಿ ಅಗತ್ಯ ಎಂದರು.
ಬ್ಲಾಕ್ ಅಧ್ಯಕ್ಷ ಎಚ್.ಟಿ.ಹನುಮಂತಪ್ಪ ಮಾತನಾಡಿ, ಕ್ಷೇತ್ರದಲ್ಲಿ ಕಳೆದ ಬಾರಿ ಚುನಾವಣೆಯಲ್ಲಿ ಸುಳ್ಳು ಪ್ರಚಾರ ನಂಬಿ ಮಾಜಿ ಸಚಿವ ಎಚ್.ಆಂಜನೇಯ ಸೋಲು ಕಾಣಬೇಕಾಯಿತು. ಆದರೆ, ಈಗ ಜನರಿಗೆ ವಾಸ್ತವ ಗಮನಕ್ಕೆ ಬಂದಿದ್ದು, ಆಂಜನೇಯ ಅವರನ್ನು ದಾಖಲೆ ಮತಗಳ ಅಂತರದಿಂದ ಗೆಲ್ಲಿಸಲು ಪಣ ತೊಟ್ಟಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ಮತ್ತೊಮ್ಮೆ ಅಭಿವೃದ್ಧಿ ಪರ್ವ ಆರಂಭಕ್ಕೆ ಕಾಯುತ್ತಿದ್ದಾರೆ ಎಂದು ಹೇಳಿದರು.
ಜಿಪಂ ಮಾಜಿ ಅಧ್ಯಕ್ಷೆ ಇಂದಿರಾ ಕಿರಣ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಫೋಟೋ ಕ್ಯಾಪ್ಷನ್
ಹೊಳಲ್ಕೆರೆ ತಾಲ್ಲೂಕು ಎಚ್.ಡಿ.ಪುರದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯನ್ನು ಮಾಜಿ ಸಚಿವ ಎಚ್.ಆಂಜನೇಯ ಉದ್ಘಾಟಿಸಿದರು.