ನಾಯಕನಹಟ್ಟಿ::
ಹೋಬಳಿಯ ಎನ್ ದೇವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರು ಗ್ರಾಮಗಳು ಕಂದಾಯ ಇಲಾಖೆಯ ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಘೋಷಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಹಸಿಲ್ದಾರ್ ಎನ್ ರಘುಮೂರ್ತಿ ಹೇಳಿದರು.
ಅವರು ಶುಕ್ರವಾರ ಎನ್ ದೇವರಹಳ್ಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರುಗಳೊಂದಿಗೆ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲಿರುವಂತಹ ಸಮಸ್ಯೆಗಳನ್ನು ಕುರಿತಾದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿ ಈಗಾಗಲೇ ನಾಯಕನಹಟ್ಟಿ ಹೋಬಳಿಯ ಗೌಡಗೆರೆ ನೇರಲಗುಂಟೆ ಎನ್ ಮಹದೇವಪುರ ಮಲ್ಲೂರಹಳ್ಳಿ ಅಬ್ಬೇನಹಳ್ಳಿ ಹಳ್ಳಿಗಳು ಸೇರಿದಂತೆ 32 ಹಳ್ಳಿಗಳನ್ನು ಕಂದಾಯ ಇಲಾಖೆಯ ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡಲಾಗಿದೆ .
ಈಗ ಈ ಸಾಲಿಗೆ ಎನ್ ದೇವರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 6 ಹಳ್ಳಿಗಳು ಸೇರ್ಪಡೆಯಾಗಲಿವೆ ಈ ಗ್ರಾಮಗಳಲ್ಲಿ ರೈತರು ಮತ್ತು ಸಾರ್ವಜನಿಕರ ಪೌತಿ ಖಾತೆ ಜಮೀನಿನ ಪೋಡಿ ಕೆಲಸ ಸಾಮಾಜಿಕ ಭದ್ರತಾ ಪಿಂಚಣಿಗಳು ದಾರಿ ವಿವಾದಗಳು ಸ್ಮಶಾನ ಒತ್ತುವರಿ ಸಮಸ್ಯೆಗಳು ರೈತರ ಪರಿಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ಇನ್ನು ಹತ್ತು ಹಲವು ಕಂದಾಯ ಇಲಾಖೆಯ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರುಗಳು ತಮ್ಮ ವ್ಯಾಪ್ತಿಯಲ್ಲಿ ಬರುವಂತಹ ಸಾರ್ವಜನಿಕರ ಯಾವುದಾದರೂ ಕಂದಾಯ ಇಲಾಖೆಯ ಸಮಸ್ಯೆಗಳಿದ್ದಲ್ಲಿ ತಕ್ಷಣ ಕಂದಾಯ ಇಲಾಖೆಯ ಗಮನಕ್ಕೆ ತರುವುದು ಸರ್ಕಾರಿ ವ್ಯವಸ್ಥೆಯ ಮೇಲೆ ಸಾರ್ವಜನಿಕರಿಗೆ ನಂಬಿಕೆ ಹಾಗೂ ಅಭಿಮಾನ ಮೂಡುವ ಹಾಗೆ ಕರ್ತವ್ಯ ನಿರ್ವಹಿಸುವುದು ನಮ್ಮೆಲ್ಲ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳಾದ ಗ್ರಾಮ ಪಂಚಾಯಿತಿ ಸದಸ್ಯರುಗಳ ಮೇಲಿದೆ.
ಈ ನಿಟ್ಟಿನಲ್ಲಿ ಒಂದು ಗ್ರಾಮ ಪಂಚಾಯಿತಿ ತಾಲೂಕಿಗೆ ಮಾದರಿ ಗ್ರಾಮ ಪಂಚಾಯತಿಯಾಗಿ ಹೊರಹೊಮ್ಮಬೇಕು.
ಈ ನಿಟ್ಟಿನಲ್ಲಿ ಎಲ್ಲರೂ ಕೂಡ ಕಂಕಣ ಕೈಗೊಳ್ಳಬೇಕೆಂದು ತಾಸಿಲ್ದಾರ್ ಎನ್ ರಘುಮೂರ್ತಿ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಾ .ಕಾಟಂಲಿಂಗಯ್ಯ ಮಾತನಾಡಿ ಇನ್ನು ಯಾವುದಾದರೂ ಗ್ರಾಮದ ಅಭಿವೃದ್ಧಿಗಾಗಿ ಸಮಸ್ಯೆಗಳಿದ್ದಲ್ಲಿ ಇದೊಂದು ಸದಾವಕಾಶ ಪಂಚಾಯಿತಿ ಸದಸ್ಯರುಗಳು ಮುಕ್ತ ಮನಸ್ಸಿನಿಂದ ಕಂದಾಯ ಇಲಾಖೆ ಗಮನಕ್ಕೆ ತಂದು ಸಮಸ್ಯೆಗಳನ್ನು ಇತ್ಯರ್ಥಗೊಳಿಸಬೇಕೆಂದು ಗ್ರಾಮ ಪಂಚಾಯತಿ ಅಧ್ಯಕ್ಷ ಡಾ.ಕಾಟಂಲಿಂಗಯ್ಯ ಮನವಿ ಮಾಡಿದರು.