ಚಳ್ಳಕೆರೆ: ನಗರದ ಎಸ್ ಆರ್ ಎಸ್ ಹೆರಿಟೇಜ್ ಶಾಲೆ ಹಾಗೂ ಎಸ್ ಆರ್ ಎಸ್ ಸಂಸ್ಕೃತ ಪಾಠಶಾಲೆ ಇವರ ಸಹಭಾಗಿತ್ವದಲ್ಲಿ ಇಂದು ಗೀತಾ ಜಯಂತಿಯ ಪ್ರಯುಕ್ತ ಅಂತರ ಶಾಲಾ ಮಟ್ಟದ ಭಗವದ್ಗೀತ ಕಂಠಪಾಠ ಸ್ಪರ್ಧೆಯನ್ನು ಸಂಸ್ಕೃತ ಪಾಠಶಾಲಾ ಆವರಣದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ನಗರದ ವಿವಿಧ ಶಾಲೆಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದು ಪ್ರಥಮ ದ್ವಿತೀಯ ಮತ್ತು ತೃತೀಯ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನದೊಂದಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಮಾಕಂಸ್ ರೋಟರಿ ಶಾಲೆಯ ನಂದಿನಿ. ಎಸ್. ಪ್ರಥಮ ಬಹುಮಾನವನ್ನು, ಆದರ್ಶ ಶಾಲೆಯ ಜಯಾದಿತ್ಯ ದ್ವಿತೀಯ ಬಹುಮಾನವನ್ನು , ಹಾಗೂ ವಾರಿಯರ್ಸ್ ಶಾಲೆಯ ಕಾರುಣ್ಯ ತೃತೀಯ ಬಹುಮಾನವನ್ನು ಪಡೆದಿರುತ್ತಾರೆ.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಹೆರಿಟೇಜ್ ಶಾಲೆಯ ಪ್ರಾಂಶುಪಾಲರಾದ ಶ್ರೀ ವಿಜಯ್ ಬಿ.ಎಸ್ ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತ ಭಗವದ್ಗೀತೆಯ ಪ್ರಾಮುಖ್ಯತೆಯನ್ನು ತಿಳಿಸಿ ಮಕ್ಕಳ ಕರ್ತವ್ಯವೇನು ಎಂಬುದನ್ನು ನೆನಪಿಸಿದರು. ಗುರುಹಿರಿಯರನ್ನು ಗೌರವಿಸುವುದು ಮಕ್ಕಳ ಆದ್ಯ ಕರ್ತವ್ಯವೆಂಬುದು ಅವರ ಮಾತಿನ ಆಶಯವಾಗಿತ್ತು.
ಎಸ್ ಆರ್ ಎಸ್ ಸಂಸ್ಥೆಯ ಅಧ್ಯಕ್ಷರಾದ ಬಿ.ಎ.ಲಿಂಗಾರೆಡ್ಡಿ ಅವರು ವಿಜೇತರಿಗೆ ಶುಭಕೋರಿದ್ದಾರೆ.
ಈ ಕಾರ್ಯಕ್ರಮವು ಎಸ್ ಆರ್ ಎಸ್ ಆಡಳಿತ ಮಂಡಳಿಯ ಸಹಭಾಗಿತ್ವದೊಂದಿಗೆ ಸಂಸ್ಕೃತ ಪಾಠಶಾಲಾ ಶಿಕ್ಷಕರಾದ ಸುಚಿತ್ರ, ಗುರುಭಟ್ ಹಾಗೂ ಶಿಕ್ಷಕ ವೃಂದದವರ ಸಹಕಾರದೊಂದಿಗೆ ಯಶಸ್ವಿಯಾಯಿತು.