ಸಚಿವ ಡಿ.ಸುಧಾಕರ್ ಆರೋಗ್ಯ ಚೇತರಿಕೆಗೆ ಜಿಲ್ಲಾದ್ಯಾಂತ ಪ್ರಾರ್ಥನೆ
ಚಳ್ಳಕೆರೆ: ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರ ಆರೋಗ್ಯ ಶೀಘ್ರ ಚೇತರಿಕೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ವಿಶೇಷ ಪೂಜೆಗಳು, ಹೋಮಗಳು ಹಾಗೂ ಪ್ರಾರ್ಥನೆಗಳು ನಡೆಯುತ್ತಿವೆ.
ಅದರ ಭಾಗವಾಗಿ ಚಳ್ಳಕೆರೆ ನಗರದ ಅಜ್ಜನಗುಡಿ ರಸ್ತೆಯ ಸ್ವಾಮಿ ವಿವೇಕಾನಂದ ಶಾಲೆ ಸಮೀಪದಲ್ಲಿರುವ ಶ್ರೀ ಪಂಚಮುಖೇಶ್ವರ ದೇವಾಸ್ಥಾನದಲ್ಲಿ ಭಕ್ತಿಭಾವದಿಂದ ಮೃತ್ಯುಂಜಯ ಹೋಮ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಚಳ್ಳಕೆರೆ ತಾಲೂಕು ಅಧ್ಯಕ್ಷೆ ಹಾಗೂ ತಾಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯೆಯಾಗಿರುವ ಉಷಾ ಚಂದ್ರಕುಮಾರ್ ಅವರ ನೇತೃತ್ವದಲ್ಲಿ ಈ ಪೂಜಾ ಕಾರ್ಯಕ್ರಮ ನಡೆಯಿತು. ಸಚಿವರ ಆರೋಗ್ಯ ಶೀಘ್ರ ಚೇತರಿಸಿಕೊಳ್ಳಲಿ ಎಂಬ ಆಶಯದಿಂದ ಭಕ್ತರು ಸಮೂಹವಾಗಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೃತ್ಯುಂಜಯ ಹೋಮದ ಜೊತೆಗೆ ರುದ್ರಾಭಿಷೇಕ, ನವಗ್ರಹ ಶಾಂತಿ, ಮೃತ್ಯುಂಜಯ ಏಕಲಿಂಗ ಪೂಜೆ, ಶಿವ ಸಹಸ್ರನಾಮ ಪೂಜೆ, ಗಣಪತಿ ಹಾಗೂ ನವಗ್ರಹ ವಿಶೇಷ ಪೂಜೆ, ಕುಲದೇವತಾ ಪೂಜೆ, ಆದಿ ಗ್ರಾಮ ದೇವತೆಗಳ ಆರಾಧನೆ, ಆಂಜನೇಯ ಸಹಸ್ರನಾಮ ಪೂಜೆ ಸೇರಿದಂತೆ ಹಲವು ವೈದಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ಕಾರ್ಯಕ್ರಮವನ್ನು ತ್ಯಾಗರಾಜ ಜ್ಯೋಷಿ ಹಾಗೂ ಸುಬ್ರಹ್ಮಣ್ಯ ಸ್ವಾಮೀಜಿಗಳು ವೇದಮಂತ್ರಗಳೊಂದಿಗೆ ನೆರವೇರಿಸಿದರು.
ಭಕ್ತರು ಹಾಗೂ ಅಭಿಮಾನಿಗಳು ಸಚಿವರು ಶೀಘ್ರ ಗುಣಮುಖರಾಗಲಿ ಎಂದು ವಿಶೇಷ ಸಂಕಲ್ಪ ಮಾಡಿದ್ದು, ಮಹಾಮಂಗಳಾರತಿ ಮೂಲಕ ಪೂಜಾ ಕಾರ್ಯಕ್ರಮಕ್ಕೆ ಸಮಾಪ್ತಿ ಕಂಡಿತು. ಈ ವೇಳೆ ದೇವಸ್ಥಾನದಲ್ಲಿ ಭಕ್ತರ ಉಪಸ್ಥಿತಿ ಗಮನಾರ್ಹವಾಗಿತ್ತು.
ಉಷಾ ಚಂದ್ರಕುಮಾರ್ ಮಾತನಾಡಿ, “ಸಚಿವ ಡಿ. ಸುಧಾಕರ್ ಅವರು ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ನಾಯಕರು. ಅವರ ಆರೋಗ್ಯ ಶೀಘ್ರ ಚೇತರಿಸಿಕೊಳ್ಳಲಿ ಎಂಬುದು ನಮ್ಮೆಲ್ಲರ ಆಶಯ. ದೇವರ ಕೃಪೆಯಿಂದ ಅವರು ಬೇಗ ಗುಣಮುಖರಾಗುತ್ತಾರೆ ಎಂಬ ನಂಬಿಕೆ ಇದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿವು ಶಂಕರ್, ನಾಗರತ್ನ, ಗೀತಾ, ಮಲ್ಲಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.
ಸ್ಥಳೀಯರು ಸಹ ಸ್ವಯಂಪ್ರೇರಿತವಾಗಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದ್ದು, ಸಚಿವರ ಮೇಲಿನ ಜನರ ಆತ್ಮೀಯತೆ ಸ್ಪಷ್ಟವಾಗಿ ಕಂಡುಬಂತು.
ರಾಜ್ಯ, ಹಾಗೂ ವಿವಿಧ ಜಿಲ್ಲೆಗಳಲ್ಲಿಯೂ ಇದೇ ರೀತಿಯ ಪೂಜೆಗಳು ನಡೆಯುತ್ತಿರುವುದು ಗಮನಾರ್ಹವಾಗಿದ್ದು, ಸಚಿವರ ಆರೋಗ್ಯ ಚೇತರಿಕೆಗೆ ಸಾರ್ವಜನಿಕರು ಒಗ್ಗಟ್ಟಿನಿಂದ ಪ್ರಾರ್ಥಿಸುತ್ತಿದ್ದಾರೆ.

