ಕೃಷಿ ಹೊಂಡಕ್ಕೆ ಬಿದ್ದು ಹತ್ತು ವರ್ಷದ ಬಾಲಕ ಕೀರ್ತನಾ ಸಾವು;
ಚಳ್ಳಕೆರೆ ತಾಲೂಕಿನ ಚನ್ನಗಾನಹಳ್ಳಿಯಲ್ಲಿ ಘೋರ ದುರಂತ
ಕೃಷಿ ಹೊಂಡಕ್ಕೆ ಬಿದ್ದು ಹತ್ತು ವರ್ಷದ ಬಾಲಕ ಕೀರ್ತನಾ ಸಾವು;
ಗ್ರಾಮದಲ್ಲಿ ಕಣ್ಣೀರಿನ ವಿದಾಯ
ತೆರೆದ ಕೃಷಿ ಹೊಂಡಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸಾರ್ವಜನಿಕರ ಆಗ್ರಹ
ಚಳ್ಳಕೆರೆ: ತಾಲೂಕಿನ ಚನ್ನಗಾನಹಳ್ಳಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದ್ದು, ಕೃಷಿ ಹೊಂಡಕ್ಕೆ ಬಿದ್ದು ಹತ್ತು ವರ್ಷದ ಬಾಲಕ ಮೃತಪಟ್ಟಿರುವುದು ಗ್ರಾಮಸ್ಥರನ್ನು ಶೋಕ ಸಾಗರಕ್ಕೆ ತಳ್ಳಿದೆ.
ಕುಟುಂಬದವರ ಅಳಲು, ಗ್ರಾಮದವರ ನೋವು, ಹಾಗೂ ಬಾಲಕನ ಅಂತಿಮ ವಿದಾಯದ ದೃಶ್ಯಗಳು ಗ್ರಾಮದಲ್ಲೇ ಮೌನ ವಾತಾವರಣ ಸೃಷ್ಟಿಸಿವೆ.
ಮೃತ ಬಾಲಕನ ತಂದೆ ತಿಪ್ಪೇಸ್ವಾಮಿ, ತಾಯಿ ಅಂಬಿಕಾ ದುಃಖದಲ್ಲಿ ಮುಳುಗಿದ್ದು, ತಮ್ಮ ಕಂದನನ್ನು ಕಳೆದುಕೊಂಡ ನೋವಿನಲ್ಲಿ ಆಕ್ರಂದನ ಮುಗಿಲುಮುಟ್ಟಿದೆ.
ಕುಟುಂಬದವರ ಕಣ್ಣೀರು, ಗ್ರಾಮಸ್ಥರ ಸಮಾಧಾನ ಮಾತುಗಳು ಎಲ್ಲರ ಮನವನ್ನೂ ಕಲುಕುವಂತಾಗಿವೆ.
ಹೇಗೆ ನಡೆದಿದೆ ಘಟನೆ?
ಗ್ರಾಮದ ಸಮೀಪದಲ್ಲಿರುವ ಕೃಷಿ ಹೊಂಡದ ಬಳಿ ಆಟವಾಡುತ್ತಿದ್ದ ವೇಳೆ ಅಯಾ ತಪ್ಪಿದ ಕ್ಷಣದಲ್ಲಿ ಬಾಲಕ ಹೊಂಡಕ್ಕೆ ಬಿದ್ದಿದ್ದಾನೆ ಎನ್ನಲಾಗುತ್ತಿದೆ. ಘಟನೆ ಗಮನಕ್ಕೆ ಬರುತ್ತಿದ್ದಂತೆ ಕುಟುಂಬದವರು ಹಾಗೂ ಗ್ರಾಮಸ್ಥರು ಆತುರದಲ್ಲಿ ಹುಡುಕಾಟ ನಡೆಸಿದರೂ, ಬಾಲಕನ ಜೀವ ಉಳಿಸಲು ಸಾಧ್ಯವಾಗಿಲ್ಲ.
ಘಟನೆ ತಿಳಿಯುತ್ತಿದ್ದಂತೆ ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಪೋಟೋ : ಸಾಂದರ್ಭಿಕ ಚಿತ್ರ..

